ಕೇಂದ್ರದ ಎನ್‌ಡಿಎ ಸರ್ಕಾರ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು ಎಂಬ ಮಹತ್ವದ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನಗಳ ಬಳಕೆ, ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಸೌರಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಮಾದರಿ ಸೌರ ಗ್ರಾಮ ಎಂಬ ಹೊಸ ಯೋಜನೆ ಪರಿಚಯಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ನವೀಕರಿಸಬಹುದಾದ ಇಂಧನ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಹೆಸ್ಕಾಂ ಮುಂದಾಗಿದೆ. ಈ ನಿಟ್ಟಿನಲ್ಲಿ "ಮಾದರಿ ಸೌರ ಗ್ರಾಮ " ಎಂಬ ಹೊಸ ಯೋಜನೆ ಜಾರಿಗೊಳಿಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತ ಗ್ರಾಮಕ್ಕೆ ಕೇಂದ್ರ ಸರ್ಕಾರದಿಂದ ₹ 1 ಕೋಟಿ ಬಹುಮಾನ ದೊರೆಯಲಿದೆ.

ಕೇಂದ್ರದ ಎನ್‌ಡಿಎ ಸರ್ಕಾರ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು ಎಂಬ ಮಹತ್ವದ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನಗಳ ಬಳಕೆ, ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಸೌರಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಮಾದರಿ ಸೌರ ಗ್ರಾಮ ಎಂಬ ಹೊಸ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ ಹೆಸ್ಕಾಂ ವ್ಯಾಪ್ತಿಯಲ್ಲಿ 24 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಏನಿದು ಯೋಜನೆ?

ಗ್ರಾಮ ಪಂಚಾಯಿಗಳ ನೇತೃತ್ವದಲ್ಲಿ ವಸತಿ ಗ್ರಾಹಕರಿಗೆ ಪಿಎಂ ಸೂರ್ಯಘರ್‌ ಯೋಜನೆಯಡಿ ಚಾವಣಿ ಸೌರಶಕ್ತಿ ಅಳವಡಿಸುವುದು, ಇತರೆ ಗ್ರಾಹಕರಿಗೆ ಸಬ್ಸಿಡಿ ರಹಿತ ಯೋಜನೆಯಡಿ ಚಾವಣಿ ಸೌರಶಕ್ತಿ ಅಳವಡಿಸಲು ಪ್ರೋತ್ಸಾಹಿಸಲಾಗುವುದು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಪಿಎಂ ಕುಸುಮ್‌ ಬಿ ಯೋಜನೆಯಡಿ ಸೌರ ಪಂಪ್‌ಸೆಟ್‌ಗೆ ಅಳವಡಿಕೆಗೆ ಒತ್ತು ನೀಡುವುದು. ಸರ್ಕಾರಿ ಕಟ್ಟಡಗಳ ಮೇಲೆ ಚಾವಣಿ ಅಳವಡಿಸಲು ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುವುದು. (ಇದಕ್ಕೆ PPP/ESCO/ Budgetary grant model ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ಅನುದಾನ ನೀಡಲಾಗುವುದು). ಕುಡಿಯುವ ನೀರಿನ ಹಾಗೂ ಬೀದಿ ದೀಪಗಳಿಗೆ ಸೌರಶಕ್ತಿ ಅಳವಡಿಸಲು ಪ್ರೊತ್ಸಾಹಿಸಲಾಗುವುದು.

ಹೀಗೆ ಆಯ್ಕೆಯಾದ ಗ್ರಾಮಗಳಲ್ಲಿ 6 ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೌರಶಕ್ತಿ ಬಳಕೆ ಹೆಚ್ಚಿಸುವುದು, ಅಷ್ಟು ಬಳಕೆ ಮಾಡುವಂತೆ ಮಾಡುವುದು, ಈ ಮೂಲಕ ಆ ಗ್ರಾಮಗಳಲ್ಲಿ ಸೌರ ಗ್ರಾಮಗಳನ್ನು ಪರಿವರ್ತಿಸುವ ಕೆಲಸ, ಯಾವ ಗ್ರಾಮ ಹೆಚ್ಚಿನ ಸೌರಶಕ್ತಿ ಬಳಕೆ ಮಾಡುತ್ತಿರುತ್ತದೆಯೋ ಆ ಗ್ರಾಮವನ್ನು ಮಾದರಿ ಸೌರ ಗ್ರಾಮವೆಂದು ಘೋಷಿಸುವುದು, ಆ ಗ್ರಾಮಕ್ಕೆ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) ₹ 1 ಕೋಟಿ ಪ್ರೋತ್ಸಾಹಧನ (ಬಹುಮಾನ) ಲಭಿಸಲಿದೆ. ಒಂದು ವೇಳೆ ಎಲ್ಲ ಗ್ರಾಮಗಳೂ ಸೌರಗ್ರಾಮಗಳಾದರೆ ಎಲ್ಲ ಗ್ರಾಮಗಳಿಗೂ ಒಂದು ಕೋಟಿ ರೂ. ಪ್ರೋತ್ಸಾಹ ಧನ ಸಿಗಲಿದೆ.

ಸೋಲಾರ್‌ ಗ್ರಾಮಗಳನ್ನಾಗಿಸಲು ಅರಿವು ಮೂಡಿಸುವ ಕೆಲಸವನ್ನು ಹೆಸ್ಕಾಂ ಮಾಡಲಿದೆ. ಸೋಲಾರ್‌ ವಿಲೇಜ್‌ನ ಮಾಹಿತಿ ಕುರಿತು ಬ್ಯಾನರ್‌, ಭಿತ್ತಿಪತ್ರ ಅಂಟಿಸಲಾಗುತ್ತಿದೆ. ಗ್ರಾಪಂ ಸಭೆಗಳಲ್ಲಿ ಈ ಕುರಿತು ಹೆಸ್ಕಾಂ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಬೀದಿ ನಾಟಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ.

ಆಯ್ಕೆಯಾದ ಗ್ರಾಮಗಳು:

ಹೆಸ್ಕಾಂ ವ್ಯಾಪ್ತಿಯಲ್ಲಿ ಏಳು ಜಿಲ್ಲೆಗಳು ಬರುತ್ತಿದ್ದು 24 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಆಡೂರು, ಅಕ್ಕಿಆಲೂರು, ಮಾಸಣಗಿ. ವಿಜಯಪುರದ ತೆಲಗಿ, ಮೊರಟಗಿ, ಹೊನ್ನಟಗಿ, ಕಾಖಂಡಕಿ. ಬಾಗಲಕೋಟೆಯ ತೊಗಲಬಾಗಿ, ನಂದಿಕೇಶ್ವರ. ಧಾರವಾಡದ ಹೆಬಸೂರ, ಯಲಿವಾಳ, ಹೆಬ್ಬಳ್ಳಿ, ಮಿಶ್ರಿಕೋಟಿ. ಉತ್ತರ ಕನ್ನಡದ ಬನವಾಸಿ, ರಾಮನಗರ, ಮಜಲಿ, ಹೆಬ್ಳೆ. ಬೆಳಗಾವಿಯ ಮುದಕವಿ, ಅಂಬಡಗಟ್ಟಿ, ಅಳಗವಾಡಿ, ಉಚಗಾಂವ್‌. ಗದಗ ಜಿಲ್ಲೆಯ ಸೊರಣಗಿ, ಬಿಂಕದಕಟ್ಟೆ ಮತ್ತು ಗೊಗೇರಿ ಗ್ರಾಮಗಳನ್ನು ಮಾದರಿ ಸೌರ ಗ್ರಾಮಗಳ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.

ಇದರಲ್ಲಿ 6 ತಿಂಗಳವರೆಗೆ ಯಾವ ಗ್ರಾಮಗಳಲ್ಲಿ ಸೌರಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುತ್ತಾರೋ ಆ ಗ್ರಾಮವನ್ನು ಮಾದರಿ ಸೌರ ಗ್ರಾಮವೆಂದು ಘೋಷಿಸಲಾಗುತ್ತಿದೆ ಎಂದು ಹೆಸ್ಕಾಂ ತಿಳಿಸುತ್ತಿದೆ.

ಇದರಿಂದ ಸೌರಶಕ್ತಿ ಬಳಕೆ ಬಗ್ಗೆ ಜನರಲ್ಲಿ ಅರಿವು ಉಂಟಾಗುತ್ತದೆ. ಈ ಗ್ರಾಮಗಳನ್ನು ನೋಡಿಕೊಂಡು ಸೌರಶಕ್ತಿ ಮಹತ್ವ ಅರಿತು ಅಕ್ಕಪಕ್ಕದ ಹಳ್ಳಿಗಳು ಸೌರಶಕ್ತಿ ಬಳಕೆಗೆ ಮುಂದಾಗುತ್ತವೆ. ಆಗ ಸಹಜವಾಗಿಯೇ ವಿದ್ಯುತ್‌ ಅವಲಂಬನೆ ಕಡಿಮೆಯಾಗುತ್ತಾ ಸಾಗುತ್ತದೆ. ಇದೇ ಕೇಂದ್ರ ಸರ್ಕಾರದ ಉದ್ದೇಶ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆ ಮೂಲಕ ಸೋಲಾರ್‌ ಬಳಕೆಗೆ ಮುಂದಡಿ ಇಡಲಾಗಿದೆ ಎಂಬುದು ಅಧಿಕಾರಿಗಳ ಅಂಬೋಣ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಹೆಸ್ಕಾಂ ವ್ಯಾಪ್ತಿಯ 24 ಗ್ರಾಮಗಳನ್ನು ಆಯ್ಕೆ ಮಾಡಿ ಸೌರಗ್ರಾಮಗಳನ್ನಾಗಿ ಪ್ರಯತ್ನಿಸಲಾಗುತ್ತಿದೆ. 24 ಗ್ರಾಮಗಳು ಸೌರಗ್ರಾಮಗಳಾದರೆ ಎಲ್ಲ ಗ್ರಾಮಗಳಿಗೂ ಕೇಂದ್ರ ಸರ್ಕಾರದಿಂದ ₹ 1 ಕೋಟಿ ಪ್ರೋತ್ಸಾಹ ಧನ ದೊರೆಯಲಿದೆ. ಹೆಸ್ಕಾಂ ಸೋಲಾರ್‌ ಬಳಸುವಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಎಂ.ಎಲ್‌. ವೈಶಾಲಿ, ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ