ಕೇಂದ್ರ ಸರ್ಕಾರದ ಘನತ್ಯಾಜ್ಯ ವಸ್ತುಗಳ ನಿಯಮಗಳು- 2026ರ ಅನ್ವಯ ಜಿಲ್ಲೆಯ ಎಲ್ಲ ಸಾರ್ವಜನಿಕರು, ಮನೆಗಳು ಹಾಗೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು.

ಗದಗ: ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮಗಳು 2026 ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಸಹಭಾಗಿತ್ವ ಹಾಗೂ ಕಾರ್ಯತತ್ಪರತೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026ರ ಅನುಷ್ಠಾನದ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಘನತ್ಯಾಜ್ಯ ವಸ್ತುಗಳ ನಿಯಮಗಳು- 2026ರ ಅನ್ವಯ ಜಿಲ್ಲೆಯ ಎಲ್ಲ ಸಾರ್ವಜನಿಕರು, ಮನೆಗಳು ಹಾಗೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದರು.

ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕಾಗುತ್ತದೆ. ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಮಾಂಸದ ತ್ಯಾಜ್ಯ, ಹಣ್ಣು ಹೂವು ಹಾಗೂ ಕೊಳೆಯುವ ವಸ್ತುಗಳನ್ನು ಹಸಿ ತ್ಯಾಜ್ಯದ ವಿಭಾಗದಲ್ಲೂ, ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ರಬ್ಬರ್ ಮತ್ತು ಮರದ ವಸ್ತುಗಳನ್ನು ಒಣತ್ಯಾಜ್ಯದ ವಿಭಾಗದಲ್ಲೂ ನೀಡಬೇಕು. ಡೈಪರ್ಸ, ಸ್ಯಾನಿಟರಿ ನ್ಯಾಪಕಿನ್‌ಗಳಂಥ ವಸ್ತುಗಳನ್ನು ಸ್ಯಾನಿಟರಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕು. ಇನ್ನುಳಿದಂತೆ ಪೇಂಟ್ ಡಬ್ಬಗಳು, ಔಷಧ ಬಾಟಲಿಗಳು, ಇ- ವೇಸ್ಟ್ , ಬಲ್ಬ್, ಹಳೆಯ ಬ್ಯಾಟರಿ ಹಾಗೂ ಬಳಸಿದ ಸಿರಿಂಜ್ ಮತು ಬ್ಯಾಂಡೇಜ್‌ಗಳನ್ನು ವಿಶೇಷ ತ್ಯಾಜ್ಯದ ಅಡಿಯಲ್ಲಿ ನೀಡಲು ಸೂಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಬಲ್ಕ್ ವೇಸ್ಟ್ ಜನರೇಟರ್(ಬೃಹತ್ ಕಸ ಉತ್ಪಾದಕರು)ರನ್ನು ಗುರುತಿಸಬೇಕು. ದಿನಕ್ಕೆ 100 ಕೆಜಿಗಿಂತ ಹೆಚ್ಚು ಕಸ ಉತ್ಪಾದಿಸುವ ಅಥವಾ ಪ್ರತಿನಿತ್ಯ 40000 ಲೀಟರ್‌ಗಿಂತ ಹೆಚ್ಚು ನೀರು ಬಳಸುವ, 20 ಸಾವಿರ ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಸಂಸ್ಥೆಗಳು ಈ ನಿಯಮದಡಿ ಬರುತ್ತವೆ. ಹಾಸ್ಟೆಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಕಲ್ಯಾಣಮಂಟಪಗಳು, ಅಪಾರ್ಟ್ಮೆಂಟ್‌ಗಳು ಇದರ ವ್ಯಾಪ್ತಿಗೆ ಬರುತ್ತಿದ್ದು, ಅಂಥವುಗಳನ್ನು ಗುರುತಿಸಿ ಕಡ್ಡಾಯವಾಗಿ ವೆಬ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಬೇಕು. ಹೊಸ ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 ಹಾಗೂ ವಿಲೇವಾರಿ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026ರ ನಿಯಮಗಳು ಏ. 1 ರಿಂದ ಜಾರಿಗೆ ಬಂದಿದೆ. ಅಕ್ಟೋಬರ್ 30ರೊಳಗೆ ಎಲ್ಲ ನಗರ ಪ್ರದೇಶಗಳಲ್ಲಿ ಇರುವ ಹಳೆಯ ಕಸದ ರಾಶಿಗಳ ನಿರ್ವಹಣೆ ಭೌಗೋಳಿಕ ಮ್ಯಾಪಿಂಗ್ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದರು.

ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಚಳಗೇರಿ, ಪರಿಸರ ಅಧಿಕಾರಿ ಲೋಹಿತ್‌ಕುಮಾರ್ ಪಿ.ಜೆ., ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಆನಂದ ಬದಿ, ಕೊಟ್ರೇಶ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆರೋಗ್ಯ ಇಲಾಖೆ, ಪರಿಸರ ಇಲಾಖೆ ಅಧಿಕಾರಿಗಳು ಇದ್ದರು.