ಸಾರಾಂಶ
ಬಹಳ ದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಪಹಣಿ ಸಮಸ್ಯೆ ಪರಿಹರಿಸಲು ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಬಹಳ ದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಪಹಣಿ ಸಮಸ್ಯೆ ಪರಿಹರಿಸಲು ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತಿದೆ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.ತಾಲೂಕಿನ ಬೆಳವಿ ಗ್ರಾಮ ಪಂಚಾಯತಿಯಲ್ಲಿ ಭೂ ಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಪ್ರತಿ ರೈತರ ಹೆಸರಿನಲ್ಲಿ ದಾಖಲಾತಿ ದೊರೆಯುವ ವ್ಯವಸ್ಥೆಯಾಗಲಿದೆ. ಸರ್ವೇ ಇಲಾಖೆಯ ಅಧಿಕಾರಿಗಳು ಗ್ರಾಮದ ರೈತರ ಮನೆಗೆ ಭೇಟಿ ನೀಡಿ ಜಂಟಿ ಖಾತೆದಾರರನ್ನು ಬೇರ್ಪಡಿಸಿ ಹೊಲದ ಹದ್ದು ಬಸ್ತಿ, ಪೋಡಿ ನಕ್ಷೆ ಮಾಡಿ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಸೌಲಭ್ಯಗಳು ಸಿಗುವ ವ್ಯವಸ್ಥೆ ಮಾಡಲಿದ್ದಾರೆ. ರೈತರು ತಮ್ಮ ತಮ್ಮಲ್ಲಿ ತಂಟೆ ತಕರಾರು ಮಾಡದೆ ಸಹಕಾರದೊಂದಿಗೆ ಪೋಡಿಮುಕ್ತ ಗ್ರಾಮಕ್ಕೆ ಕೈಜೋಡಿಸಬೇಕು ಎಂದವರು ಹೇಳಿದರು.ತಾಲೂಕಾ ಭೂ ದಾಖಲಾತಿಯ ಸಹಾಯಕ ನಿರ್ದೇಶಕ ತನ್ವಿರ್ ಢಾಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಲದ ಉತಾರ ಹೆಸರಿನ ರೈತರು ಪೋಡಿಗಾಗಿ ಯಾರೂ ಅರ್ಜಿ ಸಲ್ಲಿಸಬೇಕಾಗಿಲ್ಲ. ಕೋರ್ಟನಲ್ಲಿ ತಕರಾರು ಇದ್ದವರನ್ನು ಹೊರತುಪಡಿಸಿ ಗ್ರಾಮದ ಎಲ್ಲ ರೈತರಿಗೆ ಪೋಡಿ ಮಾಡಿ ಉತಾರ ನೀಡಲಾಗುವುದು. ಸರ್ವೇ ಅಧಿಕಾರಿಗಳು ಮನೆ ಮನೆಗೆ ಭೆಟ್ಟಿಕೊಟ್ಟಾಗ ಮಾಹಿತಿ ನೀಡಿ ಸಹಕರಿಸಿ ಎಂದರು.
ಗ್ರಾಪಂ ಅಧ್ಯಕ್ಷೆ ಪಾರ್ವತಿ ಚಿಕ್ಕಣಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಘಸ್ತಿ, ಸದಸ್ಯರಾದ ಸತ್ಯಪ್ಪ ನಾಯಿಕ, ಜಯಶ್ರೀ ಸತ್ಯಾಯಿಗೋಳ, ಶೋಭಾ ಮಗದುಮ್ಮ, ಚನಮಲ್ಲಾ ನಾಯಿಕ, ರಾಮಣ್ಣ ತೇರದಾಳಿ, ವಿಠ್ಠಲ ಅವುಬಾಯಿಗೋಳ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ, ಗ್ರಾಮ ಲೆಕ್ಕಾಧಿಕಾರಿ, ನೇತ್ರಾವತಿ ನಾಯಕ್, ಪಿಡಿಒ ಶೀಲಾ ತಳವಾರ, ಸರ್ವೆ ಇಲಾಖೆಯ ಟಿ.ಎಸ್. ಜಮಾದಾರ, ವಿ.ಬಿ ಗಾಯಕವಾಡ, ರೈತರಾದ ಅಪ್ಪಾಸಾಹೇಬ ಸಾರಾಪುರೆ, ಅಜೀತಕುಮಾರ ನಾಯಿಕ, ರಾಮಣ್ಣ ಬಾಳಿಕಾಯಿ, ಹೊನ್ನಪ್ಪ ನಾಯಿಕ, ನಿಂಗೌಡ ಮಗದುಮ್ಮ, ಸಂಜೀವ ನಾಯಿಕ, ಕಿರಣ ಹರಗಾಪುರೆ, ಥಳೆಪ್ಪ ದಂಡಿ, ಶಕ್ತಿಸಿಂಗ ಖಟಾವಕರ ಮತ್ತಿತರರು ಇದ್ದರು.