ಸಾರಾಂಶ
ಅಜೆಕಾರು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಮುಂದಿನ 15 ದಿನಗಳಲ್ಲಿ ಜಲ್ ಜೀವನ್ ಮಿಷನ್ ವಾರಾಹಿ ಕುಡಿಯುವ ನೀರಿನ ಪೈಪ್ಲೈನ್ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರಿನಿವಾಸ ಪೂಜಾರಿ ಹೇಳಿದರು.ಅವರು ಅಜೆಕಾರು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಕೆಲವೆಡೆ ರಸ್ತೆಗಳಲ್ಲಿ ಕಾಮಗಾರಿ ವೇಳೆಯಲ್ಲಿ ಅನಾಹುತಗಳು ನಡೆಯುತ್ತಿದ್ದು, ಅದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.ಗ್ರಾಮೀಣ ಭಾಗಗಳಲ್ಲಿ ಬಡವರು ಮನೆಕಟ್ಟಲು 9/11 ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರ ಬಗ್ಗೆ ಈಗಾಗಲೇ ಸಚಿವರೊಂದಿಗೆ ಮಾತನಾಡಲಾಗಿದೆ. ಸಚಿವರು ಶೀಘ್ರದಲ್ಲೇ ಸ್ಪಂದಿಸುವ ಭರವಸೆಯಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸಲಾಗುವುವುದೆಂದು ಭರವಸೆ ನೀಡಿದರು.ಸಭೆಯಲ್ಲಿ ಕಾರ್ಕಳ ತಹಸೀಲ್ದಾರ್ ಪ್ರದೀಪ್ ಆರ್., ಶಶಿಧರ್ ಕೆ.ಜೆ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ಮರ್ಣೆ ಗ್ರಾ.ಪಂ. ಅಧ್ಯಕ್ಷೆ ಪ್ರಭಾವತಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.