ವಿದ್ಯುತ್ ಕಡಿತ ಸಮಸ್ಯೆಗೆ ಪರಿಹಾರ: ದರ್ಶನಾಪೂರ

| Published : Feb 08 2024, 01:32 AM IST

ಸಾರಾಂಶ

110 ಕೆವಿ ಸಬ್ ಸ್ಟೇಷನ್ ಕಾಮಗಾರಿಗೆ ಚಾಲನೆ ದೊರಕಿದ್ದು, ಸಾರ್ವಜನಿಕರ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ

ಕನ್ನಡಪ್ರಭ ವಾರ್ತೆ ಶಹಾಪುರ

ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿಗೆ ಚಾಲನೆ ದೊರಕಿದ್ದು, ಸಾರ್ವಜನಿಕರ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.

ದಿಗ್ಗಿ ಗ್ರಾಮದಲ್ಲಿ 11.96. ಕೋಟಿ ವೆಚ್ಚದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಯೋಜನೆಯಿಂದ ಮುಡಬೂಳ, ಹಾಲಬಾವಿ, ಹುಲಕಲ್, ಭೀಮರಾಯನ ಗುಡಿ ಕ್ಯಾಂಪ್, ಭೀಮರಾಯನ ಗುಡಿ ಅಗ್ರಿಕಲ್ಚರ್ ಸೇರಿ ವಿವಿಧ ಭಾಗಗಳಲ್ಲಿ ಹೆಚ್ಚುವರಿ ವಿದ್ಯುತ್‌ ವಿತರಣೆಯಾಗುತ್ತದೆ. ಲೋ ವೋಲ್ಟೇಜ್‌, ವಿದ್ಯುತ್‌ ಕಡಿತ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆಗೆ ಸಹಕಾರಿಯಾಗಲಿದೆ ಎಂದರು.

ಶಹಾಪುರ ಮತಕ್ಷೇತ್ರದ ವನದುರ್ಗಾ, ಗುತ್ತಿ ಬಸವಣ್ಣದಲ್ಲಿ 110 ಕೆವಿ ಸಬ್ ಸ್ಟೇಷನ್ ಗೆ ಜಾಗ ನೀಡಲಾಗಿದೆ. ಶಿರವಾಳ ಗ್ರಾಮದ 110 ಕೆವಿ ಸ್ಟೇಷನ್ ಇಷ್ಟರಲ್ಲೇ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೆ ಅಂದಾಜು 200 ಕೋಟಿ ರು. ವೆಚ್ಚದಲ್ಲಿ ಕೆಂಭಾವಿಯಲ್ಲಿ 220 ಕೆವಿ ಸಬ್ ಸ್ಟೇಷನ್ ಆಗಲಿದೆ. ಗೋಗಿ ಸಬ್ ಸ್ಟೇಷನ್ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜೆಸ್ಕಾಂ ತಾಂತ್ರಿಕ ನಿರ್ದೇಶಕ ಆರ್. ಡಿ. ರಾಜಶೇಖರ್ ಮಾತನಾಡಿ, ಈ ಗ್ರಾಮದಲ್ಲಿ 110 ಕೆವಿ ಸಬ್ ಸ್ಟೇಷನ್ ಆಗುವುದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ವಿದ್ಯುತ್ ಭಾರ ಕಡಿಮೆಯಾಗಲಿದೆ. ಗುಣಮಟ್ಟದ ವಿದ್ಯುತ್ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಬ್ ಸ್ಟೇಷನ್ ನಿರ್ಮಾಣಕ್ಕೆ ಭೂಮಿ ನೀಡಿದ ದಿಗ್ಗಿ ಗ್ರಾಮದ ಸಾಹೇಬಗೌಡ ಹಾಗೂ ಅಂಬರೀಶ್ ಅವರನ್ನು ಸನ್ಮಾನಿಸಲಾಯಿತು. ಕಾಮಗಾರಿಯನ್ನು ನಿಗದಿತ ಅವಧಿ ಒಳಗೆ ಗುಣಮಟ್ಟದಲ್ಲಿ ಕಾಮಗಾರಿ ಮುಗಿಸಿಕೊಡುವಂತೆ ಗುತ್ತಿಗೆ ಪಡೆದ ಗುತ್ತಿಗೆದಾರ ಸಂಜೀವ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಹೋತಪೇಟ್ ಗ್ರಾಪಂ ಅಧ್ಯಕ್ಷೆ ಅಂಬಲಮ್ಮ, ಜೆಸ್ಕಾಂ ಚೀಫ್ ಎಂಜಿನಿಯರ್ ಚಂದ್ರಕಾಂತ್ ಪಾಟೀಲ್, ಎಸ್.ಸಿ. ಖಂಡಪ್ಪ, ಇಇ ರಾಜೇಶ್ ಹಿಪ್ಪರಗಿ, ಇಇ ಪ್ರಕಾಶ್ ಚಿನ್ನ ಶೆಟ್ಟಿ, ರಾಘವೇಂದ್ರ, ಎಇಇ ಮಲ್ಲಿಕಾರ್ಜುನ, ಭೀಮಶಂಕರ್, ಮರೆಪ್ಪ ಕಡೆಕರ್, ಜಿಪಂ ಮಾಜಿ ಸದಸ್ಯ ವಿನೋದ್ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಹೊನ್ನಪ್ಪಗೌಡ, ಶಂಕರಗೌಡ, ಧರ್ಮಣ್ಣ ಯಾದಗಿರಿ ಇತರರಿದ್ದರು.

ಬಿಜೆಪಿಯಿಂದ ಅಪಪ್ರಚಾರ: ದರ್ಶನಾಪುರ

ಗ್ಯಾರಂಟಿ ಯೋಜನೆ ಜಾರಿ ಅರಗಿಸಿಕೊಳ್ಳಲಾಗದೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಪ್ರೋತ್ಸಾಹ ಧನ, ಉಚಿತ ಬಸ್ ಪ್ರಯಾಣ ಮಾಡುತ್ತಿದ್ದು, ಉಚಿತ ಅಕ್ಕಿ ಹಾಗೂ ವಿದ್ಯುತ್ ಪಡೆಯುತ್ತಿದ್ದು, ನೀವು ಅಧಿಕಾರದಲ್ಲಿದ್ದಾಗ ಇಂತಹ ಒಂದು ಕಾರ್ಯಕ್ರಮ ಮಾಡಲಿಲ್ಲ ಎಂದು ಜನರು ಕೇಳುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಆರೋಪಿಸಿದರು.

ಬಿಜೆಪಿಯವರು ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುತ್ತಾ ಬಂದರು. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆಗೆ ಮೊದಲು ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೂ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು ಬಿಜೆಪಿಯವರ ಜಾಯಮಾನವಾಗಿದೆ ಎಂದು ಟೀಕಿಸಿದರು.