- ಯರಲಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮವಸ್ತ್ರ, ತಟ್ಟೆ, ಲೋಟ ವಿತರಣಾ ಸಮಾರಂಭ
- - -ಕನ್ನಡಪ್ರಭ ವಾರ್ತೆ ಜಗಳೂರು
ಸಮಾಜದಲ್ಲಿರುವ ಪ್ರತಿಯೊಂದು ಸಮಸ್ಯೆಗೆ ಶಿಕ್ಷಣ ಒಂದೇ ಶಾಶ್ವತ ಪರಿಹಾರ ನೀಡಬಲ್ಲದು ಎಂದು ಕೆ.ಪಿ.ಸಿ.ಸಿ. ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್ ಹೇಳಿದರು.ತಾಲೂಕಿನ ಯರಲಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ಶಾಲಾ ಸಮವಸ್ತ್ರ, ತಟ್ಟೆ, ಲೋಟ ಹಾಗೂ ವಾಟರ್ ಬಾಟಲ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಉಳಿದು ಬೆಳೆಯಬೇಕಾದರೆ ಸರ್ಕಾರದೊಂದಿಗೆ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ. ಯಾವುದೇ ಖಾಸಗಿ ಹೈಟೆಕ್ ಶಾಲೆಗೂ ಕಡಿಮೆ ಇಲ್ಲದಂತೆ ಕಲಿಕಾ ವಾತಾವರಣ ನಿರ್ಮಿಸಿರುವುದು ಸಂತಸ ತಂದಿದೆ. ಇದಕ್ಕೆ ಸೇತುವೆಯಾಗಿ ಕೆಲಸ ಮಾಡಿದ ಶಾಲಾ ಮುಖ್ಯಶಿಕ್ಷಕರ ಆಸಕ್ತಿ ಅಭಿನಂದನಾರ್ಹ. ಜೀವನದಲ್ಲಿ ವ್ಯಕ್ತಿಗಿಂತ ಆತನ ಸಾಧನೆ ಮುಖ್ಯ ಎಂಬುದಕ್ಕೆ ಈ ಶಾಲೆಯೇ ಸಾಕ್ಷಿಯಾಗಿದೆ ಎಂದರು.
ಶಾಲೆಗೆ ಈಗಾಗಲೇ 3 ಸ್ಮಾರ್ಟ್ ಕ್ಲಾಸ್ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ಅಭಾವವಿರುವ ಕುರಿತು ಶಾಸಕರ ಗಮನಕ್ಕೆ ತಂದು ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲು ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿ.ಎಸ್.ಆರ್ ಅನುದಾನದಡಿ ಖಾಸಗಿ ಶಾಲಾ ವಾಹನ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಶಾಲಾ ಮೈದಾನ ಅಭಿವೃದ್ಧಿಗೂ ಸೂಕ್ತ ಅನುದಾನ ತರಲು ಸಕಾರಾತ್ಮಕವಾಗಿ ಸ್ಪಂದಿಸುವೆ ಎಂದು ಭರವಸೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಚಂದ್ರಪ್ಪ ಮಾತನಾಡಿ, ನಾನು ಶಾಲೆಗೆ ಬಂದು ಕೆಲವೇ ತಿಂಗಳುಗಳಾಗಿದ್ದರೂ, ಗೆಳೆಯರ ನೆರವಿನಿಂದ ಶಾಲೆ ವಿಭಿನ್ನವಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದೇನೆ. ವೀರೇಶ್ ವಡೇನಾಪೂರ (ಅಧ್ಯಕ್ಷ, ಜಿಲ್ಲಾ ಸರ್ಕಾರಿ ನೌಕರರ ಸಂಘ) ವಾಟರ್ ಬಾಟಲ್, ಆನಂದ್ ಗೌಡ್ರು (ಜಿಲ್ಲಾ ವಾಣಿಜ್ಯ ತೆರಿಗೆ ಅಧಿಕಾರಿ) – ತಟ್ಟೆ ಹಾಗೂ ಲೋಟ, ಶ್ರೀನಿವಾಸರೆಡ್ಡಿ ರಾಯರೆಡ್ಡಿ (ಮೇಲ್ವಿಚಾರಕರು, ಐ.ಜಿ. ಕಚೇರಿ) ನೋಟ್‌ಬುಕ್, ಶರಬೇಶ (ಹೋಟೆಲ್ ಮಾಲೀಕರು) ಇಂಗ್ಲಿಷ್ ಕಲಿಕಾ ಪೂರ್ಣ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ನೆರವಾದ ದಾನಿಗಳನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದರು.ಹಿರಿಯ ಪತ್ರಕರ್ತ ಅಣಬೂರು ಮಠದ ಕೊಟ್ರೇಶ್ ಸರ್ಕಾರಿ ಸೇವೆ ಎಂದರೆ ಬರೀ ಸಂಬಳ ಪಡೆಯುವುದಷ್ಟೇ ಅಲ್ಲ. ಸಮುದಾಯವನ್ನು ಶೈಕ್ಷಣಿಕವಾಗಿ ಒಗ್ಗೂಡಿಸುವುದಾಗಿದೆ. ಯುವ ಉತ್ಸಾಹಿ ಕೀರ್ತಿ ಕುಮಾರ್ ಮನವಿ ಸ್ವೀಕರಿಸುವುದಕ್ಕಿಂತ ಕೆಲಸ ಮಾಡಿ ತೋರಿಸುವ ನಾಯಕರಾಗಿದ್ದಾರೆ. ಶಾಸಕರ ಸ್ಪಂದನೆಯೊಂದಿಗೆ ಮುಂದಿನ ಆರು ತಿಂಗಳೊಳಗೆ ಈ ಶಾಲೆ ಸುಸಜ್ಜಿತ ಮೈದಾನ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜಣ್ಣ ಮಾತನಾಡಿ, ಶಾಲೆಗೆ ವಾಹನ ಸೌಲಭ್ಯ ದೊರೆತರೆ ನಾನೇ ಉಚಿತವಾಗಿ ಚಾಲಕನಾಗಿ ಸೇವೆ ಸಲ್ಲಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ತಿರುಮಲೇಶ್, ವಿ.ಮಂಜಣ್ಣ, ಸೊಕ್ಕೆ ಚಂದ್ರಪ್ಪ, ಕೆಚ್ಚೇನಹಳ್ಳಿ ಹರೀಶ್ ಗೌಡ, ಎಚ್.ಡಿ.ಎಫ್.ಸಿ. ಬ್ಯಾಂಕ್ ವ್ಯವಸ್ಥಾಪಕ ರವಿಕುಮಾರ್, ಮುಖಂಡರಾದ ಯರಲಕಟ್ಟೆ ಬೋರ್‌ವೆಲ್ ಮಂಜಣ್ಣ, ತಾ.ಕಾ. ನಿ. ಸಂಘದ ಉಪಾಧ್ಯಕ್ಷ ಧನ್ಯಕುಮಾರ್, ಶಿಕ್ಷಕರಾದ ಜಗದೀಶ್, ಸಿದ್ದೇಶ್, ಮಹೇಶ್ವರಪ್ಪ, ಮಂಜನಗೌಡ, ನಾಗರಾಜ್, ವಿಜಯ್ ಕುಮಾರ್, ವೀರಯ್ಯ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - --26 ಜೆ.ಜಿ.ಎಲ್.1:
ಜಗಳೂರು ತಾಲೂಕಿನ ಯರಲಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ಶಾಲಾ ಸಮವಸ್ತ್ರ, ತಟ್ಟೆ, ಲೋಟ, ವಾಟರ್ ಬಾಟಲ್ ವಿತರಿಸಲಾಯಿತು.