ಸಾರಾಂಶ
ಶೃಂಗೇರಿ ವಿದ್ಯಾರಣ್ಯಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆ । ಅಹವಾಲುಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆದೇಶ
ಕನ್ನಡಪ್ರಭ ವಾರ್ತೆ, ಶೃಂಗೇರಿಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು. ಎಲ್ಲವನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಮಾನವೀಯ ನೆಲೆ ಗಟ್ಟಿನಲ್ಲಿಯೂ ಕೆಲಸ ಮಾಡಬೇಕು ಎಂದುಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರು,ಇ ಸ್ವತ್ತು, ನಿವೇಶನ, ರಸ್ತೆ ಸೇರಿದಂತೆ ಹತ್ತುಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆದೇಶಿಸಿದರು.ಹಕ್ಕು ಪತ್ರ ನೀಡುತ್ತಿಲ್ಲ ಎಂಬ ಗ್ರಾಮಸ್ಥರ ಮನವಿಗೆ ಶಾಸಕರು ತಾಲೂಕಿನಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಗೊಂದಲದ ನಡುವೆ ಸಮಸ್ಯೆ ಉಂಟಾಗಿದೆ. ಜಂಟೀ ಸರ್ವೆಯಾಗಬೇಕಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯಾರಣ್ಯಪುರ ಗ್ರಾಪಂ ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಪಂಚಾಯಿತಿಯಲ್ಲಿ ಆದಾಯವಿಲ್ಲ. ಅನುದಾನವೂ ಬರುತ್ತಿಲ್ಲ. ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿಲ್ಲ. ತ್ಯಾಜ್ಯ ನಿರ್ವಹಣೆಗೆ ಟ್ರಾಕ್ಟರ್ ಇಲ್ಲ. ಈಗಿರುವ ಗೂಡ್ಸ್ ಆಟೋ ಸಾಲುತ್ತಿಲ್ಲ. ಇ-ಸ್ವತ್ತು ದಾಖಲು ಮಾಡಲು ಸಮಸ್ಯೆ. ಸರ್ವೇ ಮಾಡುವವರು ಇಲ್ಲ. ಪಂಚಾಯಿತಿ ನಿರ್ವಹಿಸಿಕೊಂಡು ಹೋಗುವುದು ಕಷ್ಟವಾಗಿದೆ ಎಂದು ತಿಳಿಸಿದರು.ಗ್ರಾಮಸ್ಥ ಅಶ್ವಿನ್ ಮಾತನಾಡಿ ಶೃಂಗೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರೇ ಇಲ್ಲ. ಬಂದವರು ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಖಾಯಂ ಪ್ರಸೂತಿ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಹೆದ್ದಾರಿ ಇಲಾಖೆ ಕಾಮಗಾರಿ ವೇಳೆ ಗುಡ್ಡ ಅಗೆದು ಮಣ್ಣು ತೆಗೆದ ಪರಿಣಾಮ ತ್ಯಾವಣ, ದುರ್ಗಾ ದೇವಸ್ಥಾನ ಬಳಿ ಬೃಹತ್ ಮರಗಳು ರಸ್ತೆಗುರುಳಿ ಬೀಳುತ್ತಿವೆ. ಇದರಿಂದ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ವಿದ್ಯಾರಣ್ಯಪುರ ವ್ಯಾಪ್ತಿಗೆ ಬರುವ ಕುಡಿಯುವ ನೀರು ಮಣ್ಣು, ತ್ಯಾಜ್ಯದಿಂದ ಕೂಡುತ್ತಿದ್ದು, ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆ ನೀರು ಕುಡಿಯಲು ಯೋಗ್ಯವಿಲ್ಲ. ಮಳೆಗಾಲದಲ್ಲಿ ನದಿಯಲ್ಲಿ ಬರುವ ಮಣ್ಣು ಮಿಶ್ರಿತ ನೀರು ಟ್ಯಾಂಕ್ ಮೂಲಕ ಸರಬರಾಜು ಆಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಗ್ರಾಮಸ್ಥರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನವಿ ನೀಡಿದರು. ವಿದ್ಯಾರಣ್ಯಪುರ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಪಂ ಇಒ ಸುದೀಪ್, ತಹಸೀಲ್ದಾರ್ ಗೌರಮ್ಮ, ಕವೀಶ್, ಸೌಭಾಗ್ಯ ಮತ್ತಿತರರು ಇದ್ದರು.
6 ಶ್ರೀ ಚಿತ್ರ 3-ಶೃಂಗೇರಿ ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆ ನಡೆಯಿತು.ಶಾಸಕ ರಾಜೇಗೌಡ, ತಹಸೀಲ್ದಾರ್ ಗೌರಮ್ಮ ಮತ್ತಿತರರು ಇದ್ದರು.