ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವ: ವೈಭವದ ಬಿಸಿಲು ಕೊಂಡೋತ್ಸವ

| Published : Feb 21 2025, 11:46 PM IST

ಸೋಮನಹಳ್ಳಿ ಅಮ್ಮನವರ ಜಾತ್ರಾ ಮಹೋತ್ಸವ: ವೈಭವದ ಬಿಸಿಲು ಕೊಂಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಹೊಣಕೆರೆ ಗ್ರಾಮಸ್ಥರಿಂದ ವಿವಿಧ ಬಗೆಯ ಪೂಜಾ ವಿಧಿವಿಧಾನಗಳೂ ಸೇರಿದಂತೆ ಶುಕ್ರವಾರ ಮಧ್ಯಾಹ್ನ ವೈಭವದ ಬಿಸಿಲು ಕೊಂಡೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಹೊಣಕೆರೆ ಗ್ರಾಮಸ್ಥರಿಂದ ವಿವಿಧ ಬಗೆಯ ಪೂಜಾ ವಿಧಿವಿಧಾನಗಳೂ ಸೇರಿದಂತೆ ಶುಕ್ರವಾರ ಮಧ್ಯಾಹ್ನ ವೈಭವದ ಬಿಸಿಲು ಕೊಂಡೋತ್ಸವ ನಡೆಯಿತು.

ಕಟ್ಟೇಮನೆ ಎಂದೇ ಖ್ಯಾತಿಯ ಚಿಣ್ಯ ಗ್ರಾಮದಿಂದ ಆಗಮಿಸಿದ ಸೋಮನಹಳ್ಳಿ ಅಮ್ಮನವರ ಉತ್ಸವ ಮೂರ್ತಿಗೆ ಮಂಗಳವಾದ್ಯ ಮತ್ತು ಪೂರ್ಣಕುಂಭ ಸ್ವಾಗತ ಕೋರಿದ ಹೊಣಕೆರೆ ಗ್ರಾಮಸ್ಥರು, ಗ್ರಾಮದ ಪೂಜಾ ಕುಣಿತ, ತಮಟೆ ಹಾಗೂ ಡೊಳ್ಳುಕುಣಿತದೊಂದಿಗೆ ಸೋಮನಹಳ್ಳಿ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಕರೆತಂದ ಬಳಿಕ ಕೊಂಡೋತ್ಸವ ನಡೆಸಿದರು.

ಇದೇ ವೇಳೆ ಗ್ರಾಮದ ನೂರಾರು ಮಂದಿ ಮಹಿಳೆಯರು ತಂಬಿಟ್ಟಿನಾರತಿ ಮತ್ತು ಮಡೆ ಉತ್ಸವದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇಂದು 12 ಹಳ್ಳಿ ಗ್ರಾಮಸ್ಥರಿಂದ ಕೊಂಡೋತ್ಸವ:

ಸೋಮನಹಳ್ಳಿ ಅಮ್ಮನವರ ಜಾತ್ರಾಮಹೋತ್ಸವದ ಪ್ರಯುಕ್ತ ಚಿಣ್ಯ ಗ್ರಾಮದ ಮೂಲ ದೇವಸ್ಥಾನದಲ್ಲಿ ಅಮ್ಮನವರ ಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾಕಾರ್ಯಗಳು ನೆರವೇರಿದ ನಂತರ, ದೇವಾಲಯದ ಹಕ್ಕು ಹೊಂದಿರುವ ಸುತ್ತಮುತ್ತಲ ಗ್ರಾಮಗಳಿಂದ ತಂಬಿಟ್ಟಿನ ಆರತಿ, ಮಡೆ ಅನ್ನದ ನೈವೇದ್ಯ ನಡೆಸಲಾಗುತ್ತದೆ. ಮೆರವಣಿಗೆಯು ದೇಗುಲ ಪ್ರವೇಶಿಸಿದ ಬಳಿಕ 12ಹಳ್ಳಿ ಗ್ರಾಮಸ್ಥರಿಂದ ಕೊಂಡೋತ್ಸವ ನಡೆಯುತ್ತದೆ.

ಫೆ.23ಕ್ಕೆ ಬ್ರಹ್ಮರಥೋತ್ಸವ:

ಭಾನುವಾರ ಮಧ್ಯಾಹ್ನ ಅಮ್ಮನವರ ಮೂರ್ತಿಯನ್ನು ಸರ್ವಾಲಂಕೃತ ರಥದ ಪೀಠದಲ್ಲಿರಿಸಿ ಪೂಜೆ ನೆರವೇರಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಪರವಾಗಿ ತಹಸೀಲ್ದಾರ್ ಜಿ.ಆದರ್ಶ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುವರು. ರಥೋತ್ಸವದ ನಂತರ ನಡೆಯುವ ವಸಂತೋತ್ಸವದೊಂದಿಗೆ ಹತ್ತುದಿನಗಳ ಜಾತ್ರಾಮಹೋತ್ಸವಕ್ಕೆ ತೆರೆ ಬೀಳಲಿದೆ.