ಸೋಮವಾರಪೇಟೆ: ನಿವೇಶನರಹಿತ ಬಡವರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ಕುಂಬೂರು ಗ್ರಾಮದಲ್ಲಿ ನಡೆಸುತ್ತಿರುವ ಧರಣಿ ೫೨ ದಿನಕ್ಕೆ ಕಾಲಿಟ್ಟಿದೆ.ಮಾದಾಪುರ ಗ್ರಾಪಂನ ಕುಂಬೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಧರಣಿ ನಡೆಸುತ್ತಿದ್ದರೂ ಜನಪ್ರತಿನಿಧಿಗಳಿಂದ, ಅಧಿಕಾರಿಗಳಿಂದ ಯಾವುದೇ ಪೂರಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಜೂ. ೨೫ರಿಂದ ಸೋಮವಾರಪೇಟೆಯ ಶಾಸಕರ ಮನೆಯ ಮುಂದೆ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಲಾಗಿತ್ತು.

ಸೋಮವಾರ ಸಂಜೆ ಧರಣಿ ಸ್ಥಳಕ್ಕೆ ತೆರಳಿದ ಶಾಸಕ ಡಾ. ಮಂತರ್‌ ಗೌಡ ಅವರು, ಬಡ ನಿವೇಶನ ರಹಿತರ ಬೇಡಿಕೆಗಳನ್ನು ಆಲಿಸಿದರು. ಧರಣಿ ನಿರತರ ವ್ಯಾಪ್ತಿಯ ಗ್ರಾಪಂ ವ್ಯಾಪ್ತಿಯ ಪೈಸಾರಿ ಜಾಗವನ್ನು ಗುರುತಿಸುವಂತೆ ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು. ಮೂರು ದಿನಗಳೊಳಗೆ ಪೈಸಾರಿ ಜಾಗವನ್ನು ಗುರುತಿಸಿ ನಂತರ ಸರ್ವೆ ಮಾಡಿಸಿ, ಸೂಕ್ತ ಜಾಗದಲ್ಲಿ ನಿವೇಶನ ನೀಡುವುದಕ್ಕೆ ಕ್ರಮ ಜರುಗಿಸಲಾಗುವುದು ಎಂದು ಧರಣಿ ನಿರತರಿಗೆ ಶಾಸಕರು ಭರವಸೆ ನೀಡಿದರು.

ಧರಣಿಯಲ್ಲಿ ಭಾಗವಹಿಸಿರುವ ನಿವೇಶನ ರಹಿತರ ಪಟ್ಟಿಯನ್ನು ತೆಗೆದುಕೊಂಡು ಪಿಡಿಒಗಳು ಮುಂದಿನ ಸಭೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರು ಸೂಚಿಸಿದರು.

ಧರಣಿಯ ನೇತೃತ್ವ ವಹಿಸಿದ್ದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ, ನಿವೇಶನ ರಹಿತರ ಸಂಕಷ್ಟದ ಬದುಕನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.