ಸೋಮವಾರಪೇಟೆ: ಬೆಂಗಳೂರು - ಮಂಗಳೂರಿಗೆ ಮುಂಜಾನೆ ವೇಳೆಗೆ ತಲುಪಲು ಸಾರಿಗೆ ಬಸ್ಸಿಲ್ಲ

| Published : Jan 19 2024, 01:52 AM IST

ಸೋಮವಾರಪೇಟೆ: ಬೆಂಗಳೂರು - ಮಂಗಳೂರಿಗೆ ಮುಂಜಾನೆ ವೇಳೆಗೆ ತಲುಪಲು ಸಾರಿಗೆ ಬಸ್ಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದಿನೇದಿನೆ ಜನಸಂಖ್ಯೆ ಬೆಳವಣಿಗೆ ಹೊಂದುತ್ತಿರುವ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಜನರು ಅನೇಕ ಕಾರ್ಯ ಚಟುವಟಿಕೆಗಳಿಗೆ ಮಂಗಳೂರು ಮತ್ತು ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಮುಂಜಾನೆ ವೇಳೆಗೆ ಮಂಗಳೂರು, ಬೆಂಗಳೂರಿಗೆ ಬಸ್ ಸೌಕರ್ಯವಿಲ್ಲದೆ 1 ದಿನದ ಕೆಲಸಕ್ಕೆ ಹೊರಟರೆ 2 ದಿನಗಳು ಬೇಕಾಗುತ್ತಿದೆ.

ಎಚ್.ಆರ್. ಹರೀಶ್ ಕುಮಾರ್ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸೋಮವಾರಪೇಟೆ ತಾಲೂಕಿನ ಸಾರ್ವಜನಿಕರಿಗೆ ಬೆಂಗಳೂರು-ಮಂಗಳೂರು ಭಾಗಕ್ಕೆ ಮುಂಜಾನೆ ಜಾವ ತಲುಪಲು ಬಸ್ ಸೌಕರ್ಯವಿಲ್ಲದೆ ಪ್ರಯಾಣಿಕರ ಪರದಾಟುವಂತಾಗಿದೆ.

ದಿನೇದಿನೆ ಜನಸಂಖ್ಯೆ ಬೆಳವಣಿಗೆ ಹೊಂದುತ್ತಿರುವ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಜನರು ಅನೇಕ ಕಾರ್ಯ ಚಟುವಟಿಕೆಗಳಿಗೆ ಮಂಗಳೂರು ಮತ್ತು ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಬಸ್ ಸೌಕರ್ಯವಿಲ್ಲದೆ 1 ದಿನದ ಕೆಲಸಕ್ಕೆ ಹೊರಟರೆ 2 ದಿನಗಳು ಬೇಕಾಗುತ್ತಿದೆ.

ಈಗಾಗಲೇ ಸೋಮವಾರಪೇಟೆಯಿಂದ ರಾತ್ರಿ 8.30ಕ್ಕೆ ಹೊರಡುವ ಸಾರಿಗೆ ಬಸ್, ರಾತ್ರಿ 2 ಗಂಟೆಗೆ ಬೆಂಗಳೂರು ತಲುಪುತ್ತಿದೆ ಮತ್ತು 10 ಗಂಟೆಗೆ ಹೊರಡುವ ವೇಗದೂತ ಐರಾವತ ಬಸ್ ಮುಂಜಾನೆ 3 ಗಂಟೆ ಹೊತ್ತಿಗೆ ಬೆಂಗಳೂರು ಮೆಜೆಸ್ಟಿಕ್ ತಲುಪುತ್ತಿರುವ ಹಿನ್ನೆಲೆಯಲ್ಲಿ ಅದು ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ಅಲ್ಲಿಂದ ಬೆಂಗಳೂರಿನ ಹಲವು ಭಾಗಗಳಿಗೆ ಪ್ರಯಾಣಿಕರು ತೆರಳಬೇಕೆಂದರೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸುಮಾರು 3 ಗಂಟೆ ಕಾಯುವ ಪರಿಸ್ಥಿತಿ ಉದ್ಭವವಾಗಿದೆ. ಇನ್ನೂ ಒಂಟಿ ಮಹಿಳೆ ಮತ್ತು ಹುಡುಗಿಯರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡರೆ ಅಲ್ಲಿನ ಪರಿಸ್ಥಿತಿ ಭಯಹುಟ್ಟಿಸುವಂತಿರುತ್ತದೆ.

ಖಾಸಗಿ ಕ್ಯಾಬ್ ಮೂಲಕ ಹೋದರೆ ದುಪ್ಪಟ್ಟು ಹಣವನ್ನು ಸಾರ್ವಜನಿಕರು ನೀಡಬೇಕಾಗಿರುತ್ತದೆ. ಮುಂಜಾನೆ ವೇಳೆಗೆ ಮಂಗಳೂರು ಭಾಗಕ್ಕೆ ತಲುಪಲು ಯಾವುದೇ ಬಸ್ ಸೌಕರ್ಯ ಇಲ್ಲ. ಇದರಿಂದ ಹಲವು ಪ್ರಯಾಣಿಕರು ಸೋಮವಾರಪೇಟೆ ಶನಿವಾರಸಂತೆಯಿಂದ ಹೊರಡುವ ಮುಂಜಾನೆ ಹೊತ್ತಿನ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇನ್ನು ಈ ಬಸ್‌ಗಳು ಪ್ರತಿನಿತ್ಯ ತುಂಬಿ ತುಳುಕುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ದೂರದ ಮಂಗಳೂರು, ಬೆಂಗಳೂರು ಭಾಗಗಳಲ್ಲಿ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಅವರು ಮನೆಗೆ ಬಂದು ಹೋಗಲು ರಾತ್ರಿ ವೇಳೆ ಬಸ್ ಸೌಕರ್ಯವಿಲ್ಲದೆ ಒಂದು ದಿನದ ಪ್ರಯಾಣ ವ್ಯರ್ಥವಾಗುತ್ತಿದೆ.

ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು, ಬೆಂಗಳೂರು ಭಾಗಕ್ಕೆ ಹೋಗುತ್ತಿದ್ದಾರೆ. ಅವರುಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗುವುದಿದ್ದರೆ ಮಧ್ಯಾಹ್ನ ಆಗಿರುತ್ತದೆ. ಅಷ್ಟರಲ್ಲಿ ವೈದ್ಯರು ಸಿಗದಂತಾಗುತ್ತದೆ. ಆದ್ದರಿಂದ ರೋಗಿಗಳು ಒಂದು ರಾತ್ರಿ ಸಂಬಂಧಿಕರ ಅಥವಾ ಖಾಸಗಿ ಲಾಡ್ಜ್‌ನಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಾರೆ. ಶನಿವಾರಸಂತೆಯಿಂದ ಮಡಿಕೇರಿಗೆ, ಕುಶಾಲನಗರಕ್ಕೆ ಪ್ರಯಾಣಿಸಲು ಸಂಜೆ 6ಗಂಟೆ ನಂತರ ಯಾವುದೇ ಬಸ್ ಸೌಕರ್ಯ ಕೂಡ ಇರುವುದಿಲ್ಲ. ಈ ಭಾಗದಲ್ಲಿ ಬೇರೆ ಜಿಲ್ಲೆಗಳ ಬ್ಯಾಂಕ್ ಉದ್ಯೋಗಿಗಳು, ಶಾಲಾ ಕಾಲೇಜುಗಳ ಶಿಕ್ಷಕರು, ಹಲವು ಇಲಾಖೆಗಳ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಊರುಗಳಿಗೆ ಹೋಗಿ ಬರಲು ಎರಡು ದಿನದ ರಜೆ ಮಾಡಿ ಹೋಗುವ ಸನ್ನಿವೇಶವಿದೆ.

ಮುಂಜಾನೆ 6 ಗಂಟೆ ಹೊತ್ತಿಗೆ ಮಂಗಳೂರು ಮತ್ತು ಬೆಂಗಳೂರು ತಲುಪಲು ಮಂಗಳೂರು ಘಟಕದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಈಗಾಗಲೇ ಸಾರ್ವಜನಿಕರು ಮನವಿ ಮಾಡಿದ್ದಾರೆ. ಅಧಿಕಾರಿಯವರು ಬಸ್ ಸೌಕರ್ಯ ವ್ಯವಸ್ಥೆ ಮಾಡಲು ಬಸ್‌ಗಳ ಕೊರತೆ ಇದೆ ಮತ್ತು ಚಾಲಕರ ಮತ್ತು ನಿರ್ವಾಹಕರ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ತಕ್ಷಣವೇ ಬೆಂಗಳೂರು ಮತ್ತು ಮಂಗಳೂರು ಭಾಗಕ್ಕೆ ಬಸ್ ಸೌಕರ್ಯ ವ್ಯವಸ್ಥೆ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಲಾಗಿದೆ. ಶಾಸಕರು ಭರವಸೆ ನೀಡಿ 2 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು - ಬೆಂಗಳೂರು ಬಸ್ ಬೆಳಗ್ಗೆ 4.30ಕ್ಕೆ ಶನಿವಾರಸಂತೆಗೆ ಬರುತ್ತಿದೆ. ಈ ಬಸ್ ಬೆಳಗ್ಗೆ 9 ಗಂಟೆಗೆ ಮೆಜೆಸ್ಟಿಕ್ ತಲುಪುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರು ಮೆಜೆಸ್ಟಿಕ್ ವರೆಗೂ ನಿಂತುಕೊಂಡೇ ಹೋಗುವ ಸನ್ನಿವೇಶವಿದೆ. ಈ ಸಮಸ್ಯೆಯನ್ನ ಪರಿಹರಿಸಲು ಕೆಎಸ್‌ಆರ್‌ಟಿಸಿ ಮಂಗಳೂರು ಘಟಕದಿಂದ ನೂತನ ಸಾರಿಗೆ ವ್ಯವಸ್ಥೆ ಅಥವಾ ಬೆಂಗಳೂರು ಕೆಎಸ್‌ಆರ್‌ಟಿಸಿ ಘಟಕದಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದರೆ ಮಾತ್ರ ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣವೇ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಶಾಸಕರು ಮತ್ತು ಅಧಿಕಾರಿ ವರ್ಗದವರು ಬಸ್ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಮಂಗಳೂರು ರಾತ್ರಿ 8.30ಕ್ಕೆ ಬಸ್ ಹೊರಟು ಮಡಿಕೇರಿ ಸೋಮವಾರಪೇಟೆ ಶನಿವಾರಸಂತೆ ಮಾರ್ಗವಾಗಿ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ.

ಬೆಳಗ್ಗೆ ಬೆಂಗಳೂರಿಗೆ ತಲುಪಲು ಬಸ್ ಇಲ್ಲದೆ ಅನೇಕ ಪ್ರಯಾಣಿಕರು ಶನಿವಾರಸಂತೆಯಿಂದ ಹಗಲು ವೇಳೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ರಾತ್ರಿ ವೇಳೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ನೀಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

। ಗೋಪಾಲಪುರ ಅಶ್ರಫ್, ಉಪಾಧ್ಯಕ್ಷ, ಆಟೋ ಚಾಲಕರ ಸಂಘ ಶನಿವಾರಸಂತೆ.ನಾನು ಮಂಗಳೂರು ಭಾಗದವನಾಗಿದ್ದು, ಶನಿವಾರಸಂತೆಯಲ್ಲಿ 10 ವರ್ಷದಿಂದ ಶಿಕ್ಷಕ ವೃತ್ತಿ ಮಾಡುತ್ತಿದ್ದೇನೆ. ನನ್ನ ಊರಿಗೆ ಹೋಗಿ ಬರಲು ರಾತ್ರಿ ವೇಳೆ ಬಸ್ ಸೌಕರ್ಯವಿಲ್ಲದ ಕಾರಣ ಹಗಲಿನಲ್ಲೇ ಪ್ರಯಾಣಿಸಬೇಕಾಗಿದೆ. ಮಂಗಳೂರಿಗೆ ರಾತ್ರಿ ವೇಳೆ ಬಸ್ ಸೌಕರ್ಯ ಕಲ್ಪಿಸಿದರೆ, ಹೋಗಿ ಬರಲು ತುಂಬಾ ಉಪಯೋಗವಾಗುತ್ತದೆ. ಇಲ್ಲವಾದಲ್ಲಿ ಊರಿಗೆ ಹೋಗಿಬರುವ ಸಲುವಾಗಿ 1 ದಿನ ರಜೆ ಹಾಕಬೇಕಾಗುತ್ತದೆ. ಇಲ್ಲವೇ ಖಾಸಗಿ ವಾಹನದಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ.

। ವಿಕ್ರಾಂತ್ ಕೇಳ್ಕರ್, ಶಿಕ್ಷಕ , ಶನಿವಾರಸಂತೆ.