ಗದಗ : ಒಂದೇ ನಾಲ್ವರ ಮರ್ಡರ್ ಕೇಸ್‌ಗೆ ಬಿಗ್ ಟ್ವಿಸ್ಟ್

| Published : Apr 23 2024, 12:55 AM IST / Updated: Apr 23 2024, 10:15 AM IST

ಸಾರಾಂಶ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ತರ ವಲಯ ಐಜಿಪಿ ವಿಕಾಸಕುಮಾರ್, ಈ ಪ್ರಕರಣದಲ್ಲಿ ದೂರುದಾರಗಿರುವ ಪ್ರಕಾಶ ಬಾಕಳೆ ಅವರ ಮೊದಲ ಹೆಂಡತಿಯ ಹಿರಿಯ ಮಗ ವಿನಾಯಕ ಬಾಕಳೆ ಈ ಘಟನೆಯ ಸೂತ್ರದಾರನಾಗಿದ್ದಾನೆ ಎಂದರು.

  ಗದಗ :  ಇತ್ತೀಚೆಗೆ ಇಲ್ಲಿನ ದಾಸರ ಕಾಲನಿಯಲ್ಲಿ ನಡೆದ ನಾಲ್ವರ ಹತ್ಯೆ ಪ್ರಕರಣವನ್ನು 72 ಗಂಟೆಯೊಳಗೆ ಭೇದಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದು, ಮಗನಿಂದಲೇ ತಂದೆ, ಮಲತಾಯಿ ಮತ್ತು ಸಹೋದರನ ಹತ್ಯೆಗೆ ಸುಪಾರಿ ಕೊಟ್ಟಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ!

ಹೀಗೆ ಸುಪಾರಿ ಕೊಟ್ಟಿರುವ ಆರೋಪಿ ವಿನಾಯಕ ಬಾಕಳೆ ಸೇರಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ತರ ವಲಯ ಐಜಿಪಿ ವಿಕಾಸಕುಮಾರ್, ಈ ಪ್ರಕರಣದಲ್ಲಿ ದೂರುದಾರಗಿರುವ ಪ್ರಕಾಶ ಬಾಕಳೆ ಅವರ ಮೊದಲ ಹೆಂಡತಿಯ ಹಿರಿಯ ಮಗ ವಿನಾಯಕ ಬಾಕಳೆ ಈ ಘಟನೆಯ ಸೂತ್ರದಾರನಾಗಿದ್ದಾನೆ ಎಂದರು.

ವಿನಾಯಕನಿಂದ ಸುಪಾರಿ ಪಡೆದ ಗದಗ ರಾಜೀವಗಾಂಧಿ ನಗರ ನಿವಾಸಿ ಫೈರೋಜ್ ನಿಸಾರ ಅಹ್ಮದ್ ಖಾಜಿ (29), ಗದಗ ಹುಡ್ಕೋ ನಿವಾಸಿ ಜಿಶಾನ್ ಮೆಹಬೂಬ ಅಲಿ ಖಾಜಿ (24) ಹಾಗೂ ಮಹಾರಾಷ್ಟ್ರದ ಮೀರಜ್ ನಗರದ ನಿವಾಸಿಗಳಾದ ಸಾಹಿತ್ ಅಷ್ಪಾಕ್ ಖಾಜಿ (19), ಸೋಹೆಲ್ ಅಷ್ಪಾಕ್ ಖಾಜಿ (19), ಸುಲ್ತಾನ್ ಜಿಲಾನಿ ಖಾಜಿ (23), ಮಹೇಶ ಜಗನ್ನಾಥ ಸಾಳೋಂಕೆ (21), ವಾಹಿದ ಲಿಯಾಕತ್ ಬೇಪಾರಿ (21) ಅವರನ್ನು ಬಂಧಿಸಲಾಗಿದೆ. 

ಕ್ಷಿಪ್ರವಾಗಿ ಭೇದಿಸಿದ ಪೊಲೀಸರು:

ಗದಗ ನಗರದಲ್ಲಿ ಮನೆಗೆ ನುಗ್ಗಿ ನಾಲ್ಕು ಜನರ ಕೊಲೆ ಮಾಡಿದ್ದ ಪ್ರಕರಣ ಗದಗ ಜಿಲ್ಲೆ ಮಾತ್ರ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಎಲ್ಲ ಕೋನಗಳಲ್ಲಿ ಪ್ರಾರಂಭಿಸಿದ್ದಲ್ಲದೇ ಹಗಲು ರಾತ್ರಿ ಎನ್ನದೇ ಆರೋಪಿಗಳ ಸುಳಿವಿಗಾಗಿ ತಡಕಾಡಿದ್ದರು.

ಆದರೆ, ಖತರ್ನಾಕ್ ಆರೋಪಿ ವಿನಾಯಕ ಮಾತ್ರ ಘಟನಾ ದಿನ ಘಟನಾ ಸ್ಥಳದಲ್ಲಿಯೇ ಇದ್ದು ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದ. ಆದರೆ ಪೊಲೀಸರು ಮಾತ್ರ ಅವನ ಮೇಲೆ ಒಂದು ಕಣ್ಣಿಟ್ಟಿದ್ದರು. ಈಗ ಅದೇ ಸತ್ಯವಾಗಿದೆ.

ಆಸ್ತಿ ವಿವಾದ ಕಾರಣ?

ತಂದೆ ಪ್ರಕಾಶ ಬಾಕಳೆ ಹಾಗೂ ವಿನಾಯಕ ಬಾಕಳೆ ಮಧ್ಯೆ ಕಳೆದ ಕೆಲವು ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ಜಗಳವೇ ನಡೆದಿತ್ತು. ಇದಕ್ಕೆ ಕಾರಣ ತಂದೆ ಪ್ರಕಾಶ ಬಾಕಳೆ ಮಗ ವಿನಾಯಕನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಈ ಆಸ್ತಿಗಳಲ್ಲಿ ವಿನಾಯಕ ತಂದೆಗೆ ಗೊತ್ತಿಲ್ಲದಂತೆ ಕೆಲವಾರು ಆಸ್ತಿಗಳನ್ನು ಮಾರಾಟ ಮಾಡಿದ್ದ. ಇದರಿಂದ ಕೋಪಗೊಂಡಿದ್ದ ಪ್ರಕಾಶ ಬಾಕಳೆ, ಮಗನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದು ತಂದೆ ಮಗನ ನಡುವೆ ಕಲಹಕ್ಕೆ ಕಾರಣವಾಗಿತ್ತು. ಮುಂದೆಯೂ ನಾನು ಸುಮ್ಮನೆ ಕುಳಿತರೆ ಆಸ್ತಿ ನನಗೆ ಸಿಗುವುದಿಲ್ಲ ಎನ್ನುವ ಕಾರಣಕ್ಕಾಗಿ ವಿನಾಯಕ ಕೊಲೆಗೆ ಸುಪಾರಿ ನೀಡಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ಆಚೆ ಬಂದಿರುವ ಸತ್ಯವಾಗಿದೆ.

65 ಲಕ್ಷಕ್ಕೆ ಡೀಲ್, 2 ಲಕ್ಷ ಅಡ್ವಾನ್ಸ್:

ತಂದೆ, ತಾಯಿ ಹಾಗೂ ಸಹೋದರ ಕೊಲೆ ಮಾಡಲು ನಿಶ್ಚಯಿಸಿದ್ದ ವಿನಾಯಕ ಬಾಕಳೆ ಗದಗ ನಗರದ ಕಾರು ಮಾರಾಟ ಮಾಡುವ ಏಜೆಂಟ್ ಫೈರೋಜ್ ಹಾಗೂ ಜಿಶಾನ್ ಅವರನ್ನು ಸಂಪರ್ಕಿಸಿ ಸುಪಾರಿ ಮಾತುಕತೆ ನಡೆಸಿ ₹65 ಲಕ್ಷಕ್ಕೆ ಡೀಲ್ ಮುಗಿಸಿದ್ದಾರೆ. ಆ ಪೈಕಿ ₹2 ಲಕ್ಷ ಅಡ್ವಾನ್ಸ್ ಕೊಟ್ಟಿದ್ದಾರೆ.

ಕೊಲೆ ನಡೆಸುವ ವೇಳೆಯಲ್ಲಿ ಏನಾದರೂ ಬಂಗಾರ ಆಭರಣ, ಹಣ ಸಿಕ್ಕರೆ ಅದು ಕೊಲೆ ಮಾಡಲು ಬಂದವರಿಗೆ ಸೇರಬೇಕು ಎನ್ನುವ ಬಗ್ಗೆ ಮಾತುಕತೆ ಕೂಡಾ ಆಗಿತ್ತು. ವಿನಾಯಕನಿಂದ ಮುಂಗಡವಾಗಿ ಸುಪಾರಿ ಪಡೆದ ಈ ಇಬ್ಬರು ಮೀರಜ್‌ನಿಂದ ಬಾಡಿಗೆ ಹಂತಕರನ್ನು ಕರೆಸಿಕೊಂಡಿದ್ದಾರೆ. ಈ 8 ಆರೋಪಿಗಳು ಅತ್ಯಂತ ಜಾಣ್ಮೆ ಮತ್ತು ಕಡಿಮೆ ಸಮಯದಲ್ಲಿ ಹೊಂಚು ಹಾಕಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಗದಗ ನಗರದಲ್ಲಿಯೇ ಬಂಧಿಸಲಾಗಿದ್ದು, ಇನ್ನುಳಿದ ಐವರನ್ನು ಮೀರಜ್‌ನಲ್ಲಿ ಬಂಧಿಸಲಾಗಿದೆ.

ಸುಪಾರಿ ಕೊಡುವ ಸಂದರ್ಭದಲ್ಲಿ ವಿನಾಯಕ ಬಾಕಳೆ, ಮನೆಯಲ್ಲಿರುವ ಎಲ್ಲರನ್ನೂ ಕೊಲೆ ಮಾಡಲು ಸೂಚಿಸಿದ್ದ. ಆದರೆ ದುರ್ದೈವದಿಂದ ಅವತ್ತು ಮನೆಯಲ್ಲಿ ಸಂಬಂಧಿಗಳಾದ ಕೊಪ್ಪಳ ಭಾಗ್ಯನಗರದ ಪರಶುರಾಮ, ಲಕ್ಷ್ಮೀ ಹಾಗೂ ಅವರ ಮಗಳು ಆಕಾಂಕ್ಷಾ ಉಳಿದುಕೊಂಡಿದ್ದರು. ಬಾಡಿಗೆ ಹಂತಕರಿಗೆ ಮನೆಗೆ ನುಗ್ಗಿದಾಗ ಅಲ್ಲಿದ್ದವರು ಪ್ರಕಾಶ ಬಾಕಳೆ, ಅವರ ಪತ್ನಿ ಅಲ್ಲ ಎನ್ನುವುದು ಗೊತ್ತಿಲ್ಲದ ಹಿನ್ನೆಲೆಯಲ್ಲಿ ಏನೂ ಅರಿಯದ ಮೂವರು ಅಮಾಯಕರು ಬಲಿಯಾಗಿದ್ದಾರೆ.

ಅನುಮಾನ ಬರದಂತೆ ವರ್ತನೆ:

ತಾನೇ ಕೊಲೆಗೆ ಸುಪಾರಿ ಕೊಟ್ಟಿದ್ದು, ಅಂದು ಕೊಲೆ ನಡೆದ ಸ್ಥಳದಲ್ಲಿಯೇ ಹಾಜರಿದ್ದ ವಿನಾಯಕ ಯಾರಿಗೂ ಸಂಶಯ ಬರದಂತೆ ವರ್ತಿಸಿದ್ದು ಮಾತ್ರ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಇದು ಸಾಲದೆಂಬಂತೆ ಘಟನೆ ನಂತರ ಮನೆಗೆ ಹಲವಾರು ಹಿರಿಯ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ವೇಳೆಯಲ್ಲಿಯೂ ಅವರೊಟ್ಟಿಗೆ ಇದ್ದ ವಿನಾಯಕ ಒಂದಿಷ್ಟು ಅನುಮಾನ ಬರದಂತೆ ನಡೆದುಕೊಂಡಿದ್ದ.

ಇನ್ನು ತನ್ನ ಕಿರಿಯ ಸಹೋದರ ದತ್ತು ಬಾಕಳೆ ಈಗಾಗಲೇ ನಕಲಿ ಚಿನ್ನ ಅಡವಿಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಈ ಸಮಯದಲ್ಲಿ ಪ್ರಕಾಶ ಮತ್ತು ಸುನಂದಾ ಬಾಕಳೆ ಕೊಲೆಯಾದರೆ ಸಹಜವಾಗಿ ಎಲ್ಲರಿಗೂ ದತ್ತುನ ಮೇಲೆ ಅನುಮಾನ ಮೂಡುತ್ತದೆ, ನಾನು ಬಚಾವ್ ಆಗುತ್ತೇನೆ ಎಂದು ಎಣಿಸಿದ್ದ. ಮಾಡಿದ ತಪ್ಪಿಗೆ ಈಗ ಕಂಬಿ ಎಣಿಸುವಂತಾಗಿದೆ.

ಬಹುಮಾನ

ಸಿ.ಸಿ. ಕ್ಯಾಮೆರಾಗಳು ಸೇರಿದಂತೆ ಎಲ್ಲಿಯೂ ತಮ್ಮ ಸುಳಿವು ಬಿಟ್ಟಿರಲಿಲ್ಲ. ಅತ್ಯಂತ ಸಂಕೀರ್ಣ ಪ್ರಕರಣವಾಗಿದ್ದ ಇದನ್ನು ಗದಗ ಜಿಲ್ಲಾ ಪೊಲೀಸರು 72 ಗಂಟೆಯೊಳಗೆ ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸರ ತಂಡಕ್ಕೆ ಡಿಜಿ ಅಲೋಕ ಮೋಹನ್ ₹5 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ಆದಷ್ಟು ಬೇಗ ದೋಷಾರೋಪಣ ಪಟ್ಟಿ ಸಲ್ಲಿಸಿ, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಕ್ರಮ ಕೈಗೊಳ್ಳಲಾಗುವುದು.

ವಿಕಾಸಕುಮಾರ, ಉತ್ತರ ವಲಯ ಐಜಿಪಿ