ಹೊಸಪೇಟೆ-ಹುಬ್ಬಳ್ಳಿ ಚತುಷ್ಪಥ ರೈಲು ಮಾರ್ಗ ಶೀಘ್ರ ನಿರ್ಮಾಣ: ಸಂಸದ ರಾಜಶೇಖರ ಹಿಟ್ನಾಳ

| Published : Sep 29 2024, 01:48 AM IST

ಹೊಸಪೇಟೆ-ಹುಬ್ಬಳ್ಳಿ ಚತುಷ್ಪಥ ರೈಲು ಮಾರ್ಗ ಶೀಘ್ರ ನಿರ್ಮಾಣ: ಸಂಸದ ರಾಜಶೇಖರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆ ಹಾಗೂ ಹುಬ್ಬಳ್ಳಿ ನಡುವೆ ಈಗ ಡಬಲ್ ರೈಲು ಮಾರ್ಗ ಇದ್ದು, ಶೀಘ್ರವೇ ಇನ್ನೊಂದು ಡಬಲ್ ಲೈನ್ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿದೆ.

₹105 ಕೋಟಿ ವೆಚ್ಚದಲ್ಲಿ ನಾಲ್ಕು ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ಮುನಿರಾಬಾದ

ಹೊಸಪೇಟೆ ಹಾಗೂ ಹುಬ್ಬಳ್ಳಿ ನಡುವೆ ಈಗ ಡಬಲ್ ರೈಲು ಮಾರ್ಗ ಇದ್ದು, ಶೀಘ್ರವೇ ಇನ್ನೊಂದು ಡಬಲ್ ಲೈನ್ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಶನಿವಾರ ಸಮೀಪದ ಹೊಸಲಿಂಗಾಪುರ ಕ್ರಾಸ್ ಬಳಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ₹105 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನಾಲ್ಕು ಮೇಲ್ಸೇತುವೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಹುಲಿಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ₹29.04 ಕೋಟಿ ಮಂಜೂರು ಆಗಿದ್ದು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರು ಮಾಹಿತಿ ನೀಡಿದರು.

ಹುಲಿಗಿ, ಶಹಾಪುರ, ಹೊಸಳ್ಳಿ ಹಾಗೂ ಮೆತಗಲ್ ಗ್ರಾಮಕ್ಕೆ ಮೇಲ್ಸೇತುವೆಯ ಅವಶ್ಯಕತೆ ತುಂಬಾ ಇದೆ. ಏಕೆಂದರೆ ಈ ಭಾಗದಲ್ಲಿ ವಾಹನ ಸಂಚಾರದ ದಟ್ಟಣೆ ಅಧಿಕವಾಗಿದ್ದು, 4 ಗ್ರಾಮಗಳ ಮುಂದೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಳೆದ ಮೂರು ವರ್ಷದಲ್ಲಿ 500ಕ್ಕೂ ಅಧಿಕ ರಸ್ತೆ ಅಫಘಾತಗಳು ಸಂಭವಿಸಿ 234 ಜನರು ಅಸುನೀಗಿದ್ದಾರೆ. ಇದು ಅತ್ಯಂತ ಗಂಭೀರ ವಿಷಯವಾಗಿದೆ. ಆಫಘಾತದಲ್ಲಿ ಒಬ್ಬ ವ್ಯಕ್ತಿ ಸತ್ತರೆ ಅವನ ಕುಟುಂಬ ಭಾರಿ ಕಷ್ಟ ಅನುಭವಿಸುತ್ತದೆ. ಈ ಹಿನ್ನೆಲೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ ಎಂದು ರಾಜಶೇಖರ ಹಿಟ್ನಾಳ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಶೀಘ್ರವೇ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಮಂಜೂರಾತಿ ನೀಡಿದ್ದಾರೆ ಎಂದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಹಿಂದೆ ತಮ್ಮ ಅವಧಿಯಲ್ಲಿ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ನೂತನ ರೈಲು ಮಾರ್ಗ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಡಿಪಿಆರ್ ಕೂಡ ಸಿದ್ಧವಾಗಿದೆ. ಈ ಮಾರ್ಗ ಪೂರ್ಣಗೊಂಡ ನಂತರ ವಿಜಯಪುರ ಹಾಗೂ ಬೆಂಗಳೂರು ನಗರಗಳ ರೈಲು ಪ್ರಯಾಣ 5 ಗಂಟೆ ಕಡಿಮೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಅಮ್ಜಾದ್‌ ಪಟೇಲ್, ತಹಸೀಲ್ದಾರ ವಿಠ್ಠಲ ಚೌಗಲೇ, ಮುನಿರಾಬಾದ ಗ್ರಾಪಂ ಅಧ್ಯಕ್ಷ ಆಯೂಬ್ ಖಾನ್, ಹೊಸಳ್ಳಿ ಗ್ರಾಪಂ ಅಧ್ಯಕ್ಷ ಮಾರುತಿ ಬಗನಾಳ, ಜಿಪಂ ಮಾಜಿ ಅಧ್ಯಕ್ಷ ಜನಾರ್ದನ, ತಾಪಂ ಮಾಜಿ ಸದಸ್ಯ ಯಂಕಪ್ಪ, ಪಾಲಕ್ಷಪ್ಪ ಗುಂಗಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಾಲಚಂದ್ರ, ಗುತ್ತಿಗೆದಾರ ವೀರನಗೌಡ, ಖಾಜಾವಲಿ ಹಾಗೂ ಇತರರು ಉಪಸ್ಥಿತರಿದ್ದರು.