ದಿಂಡಿನ ಕೊಪ್ಪ ಶಾಲೆಗೆ ಶೀಘ್ರ ಆಟದ ಮೈದಾನ: ರೀನಾ ಬೆನ್ನಿ ಭರವಸೆ

| Published : Jan 05 2024, 01:45 AM IST

ಸಾರಾಂಶ

ನಾಗಲಾಪುರ ಗ್ರಾಪಂನಲ್ಲಿ ನಡೆದ ಮಕ್ಕಳ, ಮಹಿಳಾ ಹಾಗೂ ವಿಕಲ ಚೇತನರ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ದಿಂಡಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೀಘ್ರವಾಗಿ ಆಟದ ಮೈದಾನ ಮಾಡಿಸಿಕೊಡುತ್ತೇವೆ ಎಂದು ತಿಳಿಸಿದರು.

- ನಾಗಲಾಪುರ ಗ್ರಾಪಂನಲ್ಲಿ ಮಕ್ಕಳು, ವಿಕಲಚೇತನರು - ಮಹಿಳಾ ಗ್ರಾಮ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಈಗಾಗಲೇ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಳುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನ ಕಲ್ಪಸಿದ್ದು ದಿಂಡಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೀಘ್ರವಾಗಿ ಆಟದ ಮೈದಾನ ಮಾಡಿಸಿಕೊಡುತ್ತೇವೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಭರವಸೆ ನೀಡಿದರು.

ಬುಧವಾರ ನಾಗಲಾಪುರ ಗ್ರಾಪಂನಲ್ಲಿ ನಡೆದ ಮಕ್ಕಳ, ಮಹಿಳಾ ಹಾಗೂ ವಿಕಲ ಚೇತನರ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಗ್ರಾಮ ಪಂಚಾಯಿತಿಯಿಂದ ವಿಕಲ ಚೇತನರಿಗೆ ಟೈರಿಂಗ್‌ ಮಿಷನ್‌ ಮಂಟವನ್ನು ನೀಡಲಾಗಿದೆ. ವಿಕಲ ಚೇತನರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯ ಸಿಗಲಿದೆ. ಈ ಸೌಲಭ್ಯ ಪಡೆಯಬೇಕಾದರೆ ವಿಕಲ ಚೇತನರು ಯುಡಿಐಡಿ ಕಾರ್ಡನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಳುವಳ್ಳಿ ಹಾಗೂ ದಿಂಡಿನಕೊಪ್ಪ ಸರ್ಕಾರಿ ಶಾಲೆ ಮಕ್ಕಳು ಶಾಲೆಗೆ ಬೇಕಾದ ಹಲವು ಸೌಲಭ್ಯ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಮೂಲಭೂತ ಸೌಲಭ್ಯ ಶಾಲೆಗಳಿಗೆ ಒದಗಿಸುತ್ತೇವೆ. ಮಕ್ಕಳು ಯಾವುದೇ ಸಮಸ್ಯೆ ಎದುರಾದಾಗ ನಿಮ್ಮ ಶಿಕ್ಷಕರು, ಪೋಷಕರೊಂದಿಗೆ ಹೇಳಿಕೊಳ್ಳಬೇಕು. ಮಕ್ಕಳಿಗೆ ಪ್ರಶ್ನೆ ಮಾಡುವುದಕ್ಕೆ ಹಕ್ಕಿದೆ. ಯಾವುದೇ ವಿಷಯದಲ್ಲಿ ಅನುಮಾನ ಬಂದರೆ ಸಂಬಂಧ ಪಟ್ಟವರೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಿ. ಮಕ್ಕಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು. ಪರೀಕ್ಷೆ ಸಮಯವಾಗಿದ್ದರಿಂದ ಪಾಠದ ಪುಸ್ತಕಗಳನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಮಕ್ಕಳ ಗ್ರಾಮ ಸಭೆ ಅಧ್ಯಕ್ಷತೆಯನ್ನು ಹಿಳುವಳ್ಳಿ ಶಾಲೆ 4 ನೇ ತರಗತಿ ವಿದ್ಯಾರ್ಥಿ ನಾಸಿರ್‌ ವಹಿಸಿದ್ದರು. ಭಾಗವಹಿಸಿದ್ದ ಶಾಲಾ ಮಕ್ಕಳು ತಮ್ಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿ ಸಲ್ಲಿಸಿದರು. ಮಹಿಳೆಯರು ಗೃಹಲಕ್ಷ್ಮಿ ಯೋಜನೆ, ಮಹಿಳೆಯರ ಆರೋಗ್ಯದ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್‌, ಆರ್‌.ಶೋಭಾ,ಎಎಸ್‌ಐ ತಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವೀಚಾರಕಿ ದಾಕ್ಷಾಯಿಣಿ, ಪಿಡಿಒ ಪ್ರೇಂ ಕುಮಾರ್‌ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.