ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಅವರನ್ನು ನೇಮಕ ಮಾಡಲಾಗಿದೆ.

ಜೊತೆಗೆ ಪ್ರಚಾರ ಸಮಿತಿಯ ಸಹ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಮತ್ತು ಉಪಾಧ್ಯಕ್ಷರನ್ನಾಗಿ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಆದೇಶ ಮಾಡಿದ್ದಾರೆ. 

ಕಳೆದ ವಿಧಾನಸಭೆ ಚುನಾವಣೆ ವೇಳೆ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್‌ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. 

ಈಗ ಲೋಕಸಭಾ ಚುನಾವಣೆಗೆ ಆ ಸ್ಥಾನಕ್ಕೆ ಹಿಂದುಳಿದ ವರ್ಗದ ಪ್ರಾತಿನಿಧ್ಯದಡಿ ಬಿಲ್ಲವ ಸಮುದಾಯದ ವಿನಯಕುಮಾರ್‌ ಸೊರಕೆ ಅವರನ್ನು ನೇಮಿಸಲಾಗಿದೆ. 

ಜೊತೆಗೆ ದಲಿತ ಸಮುದಾಯಕ್ಕೆ ಸಹ ಅಧ್ಯಕ್ಷ ಸ್ಥಾನ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಲ್‌.ಹನುಮಂತಯ್ಯ ಅವರನ್ನು ಕಣಕ್ಕಿಳಿಸಬೇಕೆಂಬ ಒತ್ತಡ ಜಿಲ್ಲೆಯ ಕಾಂಗ್ರೆಸ್‌ ಶಾಸಕರಿಂದ ವ್ಯಕ್ತವಾಗಿತ್ತು. ಆದರೆ, ಸಚಿವ ವಿ. ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್‌ ಕೊಡಿಸಲು ಇನ್ನಿಲ್ಲದ ಲಾಬಿ ನಡೆಸಿದ್ದಾರೆ. 

ಈ ಮಧ್ಯೆ, ಹನುಮಂತಯ್ಯ ಅವರನ್ನು ಪ್ರಚಾರ ಸಮಿತಿಗೆ ನೇಮಿಸಿರುವುದು ಅವರಿಗೆ ಟಿಕೆಟ್‌ ಕೈತಪ್ಪಲಿದೆಯಾ ಎಂಬ ಅನುಮಾನಕ್ಕೆ ಎಡೆಮಾಡಿದೆ.

ಕೆಪಿಸಿಸಿಗೆ 5 ಹೊಸ ಕಾರ್ಯಾಧ್ಯಕ್ಷರ ನೇಮಕ:ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಿದೆ.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌, ಧಾರವಾಡ ಗ್ರಾಮೀಣ ಶಾಸಕ ವಿನಯ್‌ ಕುಲಕರ್ಣಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಹಾಗೂ ರಾಯಚೂರು ಜಿಲ್ಲಾ ಕಾಂಗ್ರೆಸ್‌ ಮುಖಂಡ ವಸಂತಕುಮಾರ್‌ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಶನಿವಾರ ಆದೇಶ ಮಾಡಿದ್ದಾರೆ.

ಈ ಹಿಂದೆ ಕಾರ್ಯಾಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ ಅವರು ಸಚಿವ ಸಂಪುಟ ಸೇರಿದ್ದಾರೆ. ಸಲೀಂ ಅಹಮದ್‌ ಅವರಿಗೆ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನ ನೀಡಲಾಗಿದೆ. 

ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಮತ್ತೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಗಳಿಗೆ ಸಮುದಾಯದ ಪ್ರಾತಿನಿಧ್ಯ ನೀಡಿ ಜಿ.ಸಿ.ಚಂದ್ರಶೇಖರ್‌ (ಒಕ್ಕಲಿಗ), ಮಂಜುನಾಥ್ ಭಂಡಾರಿ (ಈಡಿಗ-ಹಿಂದುಳಿದ ವರ್ಗ), ವಿನಯ್‌ ಕುಲಕರ್ಣಿ (ಲಿಂಗಾಯತ), ತನ್ವೀರ್‌ ಸೇಠ್‌ (ಅಲ್ಪಸಂಖ್ಯಾತ), ವಸಂತಕುಮಾರ್‌ (ದಲಿತ) ಅವರಿಗೆ ಜವಾಬ್ದಾರಿ ನೀಡಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೂತನ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ನಾಲ್ವರ ಹೆಸರು ಅಂತಿಮಗೊಳಿಸಲಾಗಿತ್ತು. 

ಆದರೆ, ದಲಿತ ಸಮುದಾಯದ ಪ್ರಾತಿನಿಧ್ಯಕ್ಕೆ ಒಂದು ಹೆಸರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಬೇಕಿತ್ತು. ಇದು ತಡವಾಗಿದ್ದರಿಂದ ಕಾರ್ಯಾಧ್ಯಕ್ಷರ ನೇಮಕಾತಿ ವಿಳಂಬವಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.