ಮೂಲದಲ್ಲಿಯೇ ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡಿ: ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ

| Published : Jan 07 2025, 12:33 AM IST

ಮೂಲದಲ್ಲಿಯೇ ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡಿ: ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರಗಳಲ್ಲಿ ವಾಸಿಸುವ ಜನಸಂಖ್ಯೆಯನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕು. ನಂತರದಲ್ಲಿ ವಾರ್ಡ್‌ಗಳ ಶಾಲಾ-ಕಾಲೇಜುಗಳು, ಮಾರಾಟ ಮಳಿಗೆ ಸೇರಿದಂತೆ ವಿವಿಧ ಅಂಕಿ-ಅಂಶ ಕಲೆ ಹಾಕಬೇಕು.

ಹುಬ್ಬಳ್ಳಿ:

ಮೂಲದಲ್ಲಿಯೇ ತ್ಯಾಜ್ಯ ವಿಂಗಡಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ವಿಭಾಗ, ಹು-ಧಾ ಮಹಾನಗರ ಪಾಲಿಕೆ, ರೈಲ್ವೆ, ವಾಯವ್ಯ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸೋಮವಾರ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಗರಗಳಲ್ಲಿ ವಾಸಿಸುವ ಜನಸಂಖ್ಯೆಯನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕು. ನಂತರದಲ್ಲಿ ವಾರ್ಡ್‌ಗಳ ಶಾಲಾ-ಕಾಲೇಜುಗಳು, ಮಾರಾಟ ಮಳಿಗೆ ಸೇರಿದಂತೆ ವಿವಿಧ ಅಂಕಿ-ಅಂಶ ಕಲೆ ಹಾಕಬೇಕು. ತ್ಯಾಜ್ಯ ನಿರ್ವಹಣೆಗೆ ಅವಶ್ಯಕವಾಗಿರುವ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.

ಗೋಡೆಗಳಿಗೆ ಪೋಸ್ಟರ್ ಅಂಟಿಸದಂತೆ ಕ್ರಮ, ಡಿಜಿಟಲ್ ಜಾಹೀರಾತು ಫಲಕಗಳಿಗೆ ಹಾಗೂ ಕೆಲಗೇರಿ ಕೆರೆ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ತ್ಯಾಜ್ಯ ನೀರು ಕೆರೆಗೆ ಸೇರುತ್ತಿದ್ದು ಅದನ್ನು ತಡೆಯಬೇಕು. ಇಂದೋರ ನಗರದಂತೆ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ವಿಗ್ಗಿ, ಜ್ಯೋಮ್ಯಾಟೋ, ಫ್ಲಿಫ್ ಕಾರ್ಟ್, ಅಮೆಜಾನ್ ಸೇರಿದಂತೆ ಹಲವಾರು ಆನ್‌ಲೈನ್ ಮಾರ್ಕೆಟಿಂಗ್ ಕಂಪನಿಗಳು ಪ್ಲಾಸ್ಟಿಕನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅದಕ್ಕೆ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಹಸಿರು ಕ್ಯಾಂಪಸ್ ನಿರ್ಮಿಸಿ:

ಪ್ರತಿ ವಾರ್ಡ್ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಕಸ ವಿಂಗಡಿಸಿ, ವಿಲೇವಾರಿ ಮಾಡಲು ತಿಳಿವಳಿಕೆ ನೀಡಬೇಕಿದೆ‌. ಆ ಮೂಲಕ ಹಸಿರು ಕ್ಯಾಂಪಸ್ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಸುಭಾಷ್‌ ಆಡಿ ಡಿಡಿಪಿಐ ಎಸ್.ಎಸ್. ಕೆಳದಿಮಠಗೆ ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಜನರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ತ್ಯಾಜ್ಯ ನಿರ್ವಹಣೆ ಬಗ್ಗೆ ಯೋಜನೆ ರೂಪಿಸಿ, ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ನಮ್ಮ ನಗರ ಸ್ವಚ್ಛ ನಗರ ಎಂಬ ಪರಿಕಲ್ಪನೆಯಡಿ ಕೈಗೊಂಡ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಪರಿಸರ ಅಧಿಕಾರಿ ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ರೈಲ್ವೆ ಇಲಾಖೆಯ ಉಮೇಶ ಕುಮಾರ, ಟಿ. ವಿಷ್ಣು ಭೂಷಣ್, ಅಖಿಲೇಶಕುಮಾರ ತ್ರಿಪಾಠಿ, ಪಾಲಿಕೆ ವಲಯ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.