ಸ್ಪೆಷಲ್‌ ಒಲಿಂಪಿಕ್ಸ್‌ನ ಫ್ಲೋರ್‌ಬಾಲ್‌ ಭಾರತ ತಂಡಕ್ಕೆ ಕೋಚ್‌ ಆಗಿ ಮಂಗಳೂರಿನ ಸೌಮ್ಯಾ

| N/A | Published : Mar 04 2025, 12:35 AM IST / Updated: Mar 04 2025, 12:04 PM IST

ಸ್ಪೆಷಲ್‌ ಒಲಿಂಪಿಕ್ಸ್‌ನ ಫ್ಲೋರ್‌ಬಾಲ್‌ ಭಾರತ ತಂಡಕ್ಕೆ ಕೋಚ್‌ ಆಗಿ ಮಂಗಳೂರಿನ ಸೌಮ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ಇಟೆಲಿಯಲ್ಲಿ ಮಾ.8ರಿಂದ 15ರವರೆಗೆ ನಡೆಯಲಿರುವ ‘ಸ್ಪೆಷಲ್‌ ಒಲಿಂಪಿಕ್ಸ್‌ ವರ್ಲ್ಡ್‌ ವಿಂಟರ್‌ ಗೇಮ್ಸ್‌- 2025’ರಲ್ಲಿ ಭಾರತದ ಫ್ಲೋರ್‌ಬಾಲ್‌ ತಂಡದ ತರಬೇತುದಾರರಾಗಿ ಕರ್ನಾಟಕದಿಂದ ಮಂಗಳೂರಿನ ಸೌಮ್ಯಾ ದೇವಾಡಿಗ ಆಯ್ಕೆಯಾಗಿದ್ದಾರೆ.

 ಮಂಗಳೂರು : ಇಟೆಲಿಯಲ್ಲಿ ಮಾ.8ರಿಂದ 15ರವರೆಗೆ ನಡೆಯಲಿರುವ ‘ಸ್ಪೆಷಲ್‌ ಒಲಿಂಪಿಕ್ಸ್‌ ವರ್ಲ್ಡ್‌ ವಿಂಟರ್‌ ಗೇಮ್ಸ್‌- 2025’ರಲ್ಲಿ ಭಾರತದ ಫ್ಲೋರ್‌ಬಾಲ್‌ ತಂಡದ ತರಬೇತುದಾರರಾಗಿ ಕರ್ನಾಟಕದಿಂದ ಮಂಗಳೂರಿನ ಸೌಮ್ಯಾ ದೇವಾಡಿಗ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೆಷಲ್‌ ಒಲಿಂಪಿಕ್ಸ್‌ ಭಾರತ್‌- ಕರ್ನಾಟಕದ ದ.ಕ ಜಿಲ್ಲಾ ಅಧ್ಯಕ್ಷ ಪ್ರಕಾಶ್‌ ಜೆ. ಶೆಟ್ಟಿಗಾರ್‌, ಸೌಮ್ಯಾ ಅವರು ಸುರತ್ಕಲ್‌ನ ಲಯನ್ಸ್‌ ಸ್ಪೆಷಲ್‌ ಸ್ಕೂಲ್‌ ಶಿಕ್ಷಕಿಯಾಗಿದ್ದಾರೆ. ಫ್ಲೋರ್‌ ಬಾಲ್‌ ತಂಡಕ್ಕೆ ಹಿಮಾಚಲ ಪ್ರದೇಶದಿಂದ ಇಬ್ಬರು ಮತ್ತು ಕರ್ನಾಟಕದಿಂದ ಸೌಮ್ಯಾ ಸೇರಿದಂತೆ ಒಟ್ಟು 3 ಮಂದಿ ಆಯ್ಕೆಯಾಗಿದ್ದಾರೆ ಎಂದರು.

ಸ್ಪೆಷಲ್‌ ಒಲಿಂಪಿಕ್ಸ್‌ನಲ್ಲಿ 8 ವಿಭಾಗದಲ್ಲಿ ನಡೆಯುತ್ತಿದ್ದು, ಭಾರತೀಯರು ಸ್ನೋ ಬೋರ್ಡಿಂಗ್‌, ಸ್ನೋ ಶೂ, ಅಲ್ಪೈನ್‌ ಸ್ಕೇಟಿಂಗ್‌, ಕ್ರಾಸ್‌ ಕಂಟ್ರಿ, ಫ್ಲೋರ್‌ ಬಾಲ್‌ ಮತ್ತು ಫಿಗರ್‌ ಸ್ಕೇಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ತರಬೇತುದಾರರು ಮತ್ತು ಕ್ರೀಡಾಪಟುಗಳು ಸೇರಿದಂತೆ 78 ಮಂದಿ ಭಾರತ ತಂಡದಲ್ಲಿರುತ್ತಾರೆ ಎಂದು ತಿಳಿಸಿದರು.

ಸೌಮ್ಯಾ ದೇವಾಡಿಗ ಮಾತನಾಡಿ, ಫ್ಲೋರ್‌ ಹಾಕಿಯಲ್ಲಿ 2018ರಲ್ಲಿ ಕೇರಳಕ್ಕೆ ತರಬೇತುದಾರೆಯಾಗಿ ಹೋಗಿದ್ದೆ. ಅಲ್ಲಿ ನಮ್ಮ ತಂಡ ಬೆಳ್ಳಿ ಪದಕ ಪಡೆದಿತ್ತು. 2022ರಲ್ಲಿ ಯುನಿಫೈಡ್‌ ಫುಟ್ಬಾಲ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೋಚ್‌ ಆಗಿದ್ದೆ. ಇಲ್ಲಿ ತರಬೇತು ಪಡೆದು ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಲಯನ್ಸ್‌ ಸ್ಪೆಷಲ್‌ ಸ್ಕೂಲ್‌ನ ಲಿಖಿತಾ ಕಂಚಿನ ಪದಕ ಪಡೆದಿದ್ದರು. ಈ ಬಾರಿ ಇಟೆಲಿಯಲ್ಲಿ ನಡೆಯುವ ಸ್ಪೆಷಲ್‌ ಒಲಿಂಪಿಕ್ಸ್‌ನಲ್ಲಿ ಫ್ಲೋರ್‌ಬಾಲ್‌ ತರಬೇತುದಾರೆಯಾಗಿ ಭಾರತ ತಂಡ ಮುನ್ನಡೆಸುವ ಅವಕಾಶ ಒದಗಿ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೊಸದಿಲ್ಲಿ ಮತ್ತು ಗ್ವಾಲಿಯರ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಹಲವು ಸುತ್ತಿನ ಆಯ್ಕೆ ಶಿಬಿರಗಳ ಅನಂತರ ಅಂತಿಮವಾಗಿ ಫ್ಲೋರ್‌ಬಾಲ್‌ಗೆ 8 ಮಂದಿ ಕ್ರೀಡಾಪಟುಗಳು ಮತ್ತು ಮೂವರು ಕೋಚ್‌ಗಳು ಆಯ್ಕೆಯಾಗಿದ್ದೇವೆ. ಇದೊಂದು ಹೆಮ್ಮೆಯ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು.

ನಾನು ಕಬಡ್ಡಿ ಆಟಗಾರ್ತಿ. ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡ ಬಳಿಕ ವಿಶೇಷ ಮಕ್ಕಳ ಜತೆ ಹಲವು ಆಟಗಳನ್ನು ಕಲಿತು ವಿಶೇಷ ತರಬೇತಿ ಪಡೆದೆ. ಫ್ಲೋರ್‌ ಬಾಲ್‌ನಲ್ಲಿ ವಿಶೇಷ ಆಸಕ್ತಿ ವಹಿಸಿ ಅದರಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ಅಂತಾರಾಷ್ಟ್ರೀಯವಾಗಿ ಮಹಿಳಾ ವಿಭಾಗದಲ್ಲಿ ಕೋಚ್‌ ಆಗಿ ಮಂಗಳೂರಿನಿಂದ ನಾನು ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿದರು.ಸ್ಪೆಷಲ್‌ ಒಲಿಂಪಿಕ್ಸ್‌ ಭಾರತ್‌-ಕರ್ನಾಟಕ ಕಾರ್ಯದರ್ಶಿ ನಾರಾಯಣ ಶೇರಿಗಾರ, ಕ್ರೀಡಾ ನಿರ್ದೇಶಕ ಬಿ.ಎಂ.ತುಂಬೆ, ಲಯನ್ಸ್‌ ಸ್ಪೆಷಲ್‌ ಸ್ಕೂಲ್‌ನ ಪ್ರಾಂಶುಪಾಲೆ ಪ್ರೇಮಾ ರಾವ್‌ ಇದ್ದರು.