ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇಲ್ಲಿನ ಬಾಪೂಜಿ ನಗರದಲ್ಲಿ ದಕ್ಷಿಣ ಭಾರತದಲ್ಲಿಯೇ ಮಹಿಳೆಯರು ಹೊರುವ ಏಕೈಕ ಕರಗ ಶ್ರೀ ದ್ರೌಪತಮ್ಮನವರ ಕರಗ ಮಹೋತ್ಸವ ಶನಿವಾರ ರಾತ್ರಿ ವಿಶಿಷ್ಟ, ವೈಭವ ಮತ್ತು ವಿಜೃಂಭಣೆಯಿಂದ ನಡೆಯಿತು.ನಗರದ ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಬಾಪೂಜಿ ನಗರದಲ್ಲಿ ನೆಲೆಸಿರುವ ಶ್ರೀ ಮಾತಾ ಮಹೇಶ್ವರಾಂಭ ದೇವಾಲಯದಿಂದ 62ನೇ ವರ್ಷದ ಶ್ರೀ ದ್ರೌಪತಮ್ಮ ಕರಗ ಮಹೋತ್ಸವದಲ್ಲಿ ತಮಿಳುನಾಡಿನ ಕೃಷ್ಣಗಿರಿಯ ಪುಷ್ಪಾವತಮ್ಮ(ಪುತ್ತಮ್ಮ) ಹೂವಿನ ಕರಗವನ್ನು ರಾತ್ರಿ ಹತ್ತು ಗಂಟೆಗೆ ಹೊತ್ತು ದೇವಾಲಯದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಜನತೆ ಹರ್ಷೋದ್ಗಾರ ಮಾಡಿ ಭಕ್ತಿಯಿಂದ ನಮಿಸಿದರು.
ಕರಗ ಹೊತ್ತ ಮಹಿಳೆಯಿಂದ ನೃತ್ಯಬಾಪೂಜಿ ನಗರದಿಂದ ಆರಂಭವಾದ ದ್ರೌಪದಮ್ಮನವರ ಕರಗವು ಟೌನ್ ಹಾಲ್ ವೃತ್ತದಲ್ಲಿ ಹಾಕಿದ್ದ ವೇದಿಕೆಯೇರಿತು. ವೇದಿಕೆಯಲ್ಲಿ ಕರಗ ಹೊತ್ತಿದ್ದ ಪುಷ್ಪಾವತಮ್ಮ ಹಾಡುಗಳಿಗೆ ನೃತ್ಯ ಮಾಡಿ, ಅಲ್ಲಿ ನೆರೆದಿದ್ದ ಜನರ ಮನಸೂರೆಗೊಳ್ಳುವಂತೆ ಮಾಡಿದರು. ಅಲ್ಲಿಂದ ಬಜಾರ್ ರಸ್ತೆ, ಶಿಡ್ಲಘಟ್ಟ ರಸ್ತೆಯ ಮೂಲಕ ಚಾಮರಾಜ ಪೇಟೆಯ ಅಂಬೇಡ್ಕರ್ ನಗರ ಪ್ರವೇಶಿಸಿತು.
ಅಗ್ನಿಕುಂಡ ಪ್ರವೇಶ: ನಗರದಲ್ಲಿ ಸಂಚರಿಸಿದ ಕರಗಕ್ಕೆ ಶ್ರೀರಾಮರ ದೇವಾಲಯ, ಗಂಗಮ್ಮ ದೇಗುಲ ಸೇರಿದಂತೆ ನಗರದ ಬಹುತೇಕ ದೇವಾಲಯಗಳ ಮತ್ತು ಸಾಕಷ್ಟು ಮನೆಗಳ ಬಳಿ ಕರಗಕ್ಕೆ ಪೂಜೆ, ಕಾಣಿಕೆಗಳನ್ನು ಸಲ್ಲಿಸಿ ಜನ ಕೃತಾರ್ಥರಾದರು. ನಗರದಾದ್ಯಂತ ಸಂಚರಿಸಿದ ಕರಗ ಮರಳಿ ಶ್ರೀಮಾತಾ ಮಹೇಶ್ವರಾಂಭ ದೇವಾಲಯದ ಬಳಿಗೆ ಭಾನುವಾರ ಅಪರಾಹ್ನ ತಲುಪಿ, ಅಗ್ನಿಗುಂಡ ಪ್ರವೇಶ ಮಾಡಿದ ನಂತರ ದೇವಾಲಯ ಪ್ರವೇಶಿಸಿ ಕರಗ ಮಹೋತ್ಸವಕ್ಕೆ ತೆರೆ ಬಿತ್ತು.ಶ್ರೀ ಮಾತಾ ಮಹೇಶ್ವರಾಂಭ ದೇವಿಯ ಶ್ರೀ ದ್ರೌಪದಮ್ಮನವರ ಕರಗ ಮಹೋತ್ಸವವನ್ನು ಕಣ್ಣು ತುಂಬಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಕೋಲಾರ, ಬೆಂಗಳೂರು ಗ್ರಾಮಾಂತರ,ತುಮಕೂರು ಜಿಲ್ಲೆ ಹಾಗೂ ದಕ್ಷಿಣ ಭಾರತದ ವಿವಿಧ ಕಡೆಗಳಿಂದ ಸಹಸ್ರಾರು ಮಂದಿ ಆಗಮಿಸಿ ಕರಗ ವೀಕ್ಷಿಸಿದರು.
ಈ ವೇಳೆ ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಎಂ.ಎಸ್. ಸಂದೀಪ್ ಚಕ್ರವರ್ತಿ, ನಗರಸಭೆ ಮಾಜಿ ಅಧ್ಯಕ್ಷ ಆನಂದ್ ಬಾಬುರೆಡ್ಡಿ, ನಗರಸಭಾ ಸದಸ್ಯರಾದ ಎಸ್.ಎಂ. ರಫೀಕ್, ಸಿಂಧೂರ್, ವಕೀಲ ರಾಮಮೂರ್ತಿ, ಸತೀಶ್, ಮುನಿರಾಜು, ಒಂದೇ ಮಾತರಂ ಮುನಿರಾಜು, ಸಿ.ಎನ್. ಮುರಳಿ ಮೋಹನ್, ಬಿ.ವಿ. ವೆಂಕಟೇಶ್,ಜಿ. ಮುನಿಕೃಷ್ಣ, ಮಾದೇವಪ್ಪ, ಕೆಇಬಿ ಶಿವಕುಮಾರ್,ಕೇಶವ್ ಮೂರ್ತಿ, ಶೇಷಾದ್ರಿ ಮತ್ತಿತರರು ಇದ್ದರು.