ಸಾರಾಂಶ
ಹುಬ್ಬಳ್ಳಿ:
ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಗೆ ಅನುಮೋದನೆ ನೀಡಿದ್ದು, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 31,230 (ಶೇ. 80ರಷ್ಟು) ನೌಕರರಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ಆರ್ಥಿಕ ಸಲಹೆಗಾರ್ತಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಕುಸುಮಾ ಹರಿಪ್ರಸಾದ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್)ಗಿಂತ ಯುಪಿಎಸ್ ಯೋಜನೆಯಲ್ಲಿ ನೌಕರರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಆ ಮೂಲಕ ನೌಕರರು ನಿವೃತ್ತಿಯಾಗುವ 12 ತಿಂಗಳು ಮೊದಲು ಪಡೆಯುತ್ತಿದ್ದ ಮೂಲ ವೇತನದ ಶೇ. 50ರಷ್ಟು ಪಿಂಚಣಿ ರೂಪದಲ್ಲಿ ದೊರೆಯಲಿದೆ ಎಂದರು. ವಲಯದ ಪ್ರಧಾನ ಕಚೇರಿಯಲ್ಲಿ 794, ಹುಬ್ಬಳ್ಳಿ ವಿಭಾಗದಲ್ಲಿ 10,215, ಬೆಂಗಳೂರು ವಿಭಾಗದಲ್ಲಿ 10,286, ಮೈಸೂರು ವಿಭಾಗದಲ್ಲಿ 5,952, ಹುಬ್ಬಳ್ಳಿ ಕಾರ್ಯಾಗಾರದಲ್ಲಿ 2,164, ಮೈಸೂರು ಕಾರ್ಯಾಗಾರದಲ್ಲಿ 1,358, ನಿರ್ಮಾಣ ವಿಭಾಗದಲ್ಲಿ 461 ನೌಕರರು ಸೇರಿ ಒಟ್ಟು 31,230 ನೌಕರರಿದ್ದಾರೆ. ಇವರೆಲ್ಲರೆಗೂ ಇದರ ಲಾಭ ದೊರೆಯಲಿದೆ ಎಂದರು.
ವಲಯದಲ್ಲಿ ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಅಡಿ 7712 ನೌಕರರು ಇದ್ದಾರೆ. ಎನ್‌ಪಿಎಸ್ ಅಡಿ ನಿವೃತ್ತರಾದವರಿಗೆ ಮಾತ್ರ ಯುಪಿಎಸ್ ಅನ್ವಯಿಸುತ್ತದೆ. ನೈಋತ್ಯ ರೈಲ್ವೆಯಲ್ಲಿ ಎನ್‌ಪಿಎಸ್ ಅಡಿ ಒಂದು ಸಾವಿರ ನೌಕರರು ನಿವೃತ್ತರಾಗಿದ್ದಾರೆ. ಅದರಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಅಂದಾಜು 300 ನೌಕರರು ಇದ್ದಾರೆ ಎಂದು ತಿಳಿಸಿದರು.ನೌಕರರು ಒಪಿಎಸ್‌ನಲ್ಲಿ ವಿಆರ್‌ಎಸ್ ತೆಗೆದುಕೊಳ್ಳಬಹುದು. ಆದರೆ, ಎನ್‌ಪಿಎಸ್ ಮತ್ತು ಯುಪಿಎಸ್‌ನಲ್ಲಿ ಈ ಸೌಲಭ್ಯವಿಲ್ಲ. ಈ ಮೊದಲು ಒಪಿಎಸ್‌ನಲ್ಲಿ ಕನಿಷ್ಠ ಪಿಂಚಣಿ ಇರಲಿಲ್ಲ. ಆದರೆ ಈಗ ಯುಪಿಎಸ್ ಅಡಿ ನೌಕರರಿಗೆ ಮಾಸಿಕ ಕನಿಷ್ಠ ₹ 10 ಸಾವಿರ ಪಿಂಚಣಿ ದೊರೆಯಲಿದೆ. ಹೀಗಾಗಿ ಕೇಂದ್ರದ ಹೊಸ ಯುಪಿಎಸ್ ನೌಕರರಿಗೆ ಉಪಯುಕ್ತವಾಗಲಿದೆ ಎಂದರು.
ಒಪಿಎಸ್‌ನಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ₹ 9 ಸಾವಿರ ಪಿಂಚಣಿ ದೊರೆಯುತ್ತಿತ್ತು. ಇದೀಗ ಯುಪಿಎಸ್‌ನಲ್ಲಿ ₹10 ಸಾವಿರ ದೊರೆಯಲಿದೆ. ಹೀಗಾಗಿ ನೌಕರರಿಗೆ ಒಪಿಎಸ್‌ಗಿಂತ ಯುಪಿಎಸ್ ಹೆಚ್ಚು ಪ್ರಯೋಜನವಾಗಿದೆ. ಹೊಸ ಯೋಜನೆಯಿಂದ ನೌಕರರಿಗೆ ಸೇವೆಗೆ ತಕ್ಕಂತೆ ಪಿಂಚಣಿ ದೊರೆಯಲಿದೆ. ಎನ್‌ಪಿಎಸ್‌ನಿಂದ ಯುಪಿಎಸ್‌ಗೆ ಎಷ್ಟು ನೌಕರರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಇನ್ಮುಂದೆ ಗೊತ್ತಾಗಲಿದೆ ಎಂದರು.ಎನ್‌ಪಿಎಸ್‌ನಲ್ಲಿ ಸರ್ಕಾರ ಶೇ. 14ರಷ್ಟು ತನ್ನ ವಂತಿಗೆ ನೀಡುತ್ತಿದ್ದರೆ, ನೌಕರರು ತಮ್ಮ ಮೂಲ ವೇತನದ ಶೇ. 10ರಷ್ಟು ಕೊಡುಗೆ ನೀಡುತ್ತಿದ್ದರು. ಒಟ್ಟಾರೆ ಶೇ. 24ರಷ್ಟು ಕೊಡುಗೆ ನೀಡಲಾಗುತ್ತಿತ್ತು. ಯುಪಿಎಸ್‌ನಲ್ಲಿ ನೌಕರರು 25 ವರ್ಷ ಸೇವೆ ಸಲ್ಲಿಸಿದರೆ ಅವರು ತಮ್ಮ ಮೂಲ ವೇತನದ ಶೇ. 50ರಷ್ಟುಪಿಂಚಣಿ ಪಡೆಯಲಿದ್ದಾರೆ. 15 ವರ್ಷ ಸೇವೆ ಸಲ್ಲಿಸಿದವರಿಗೆ ಶೇ. 30 ರಷ್ಟುಪಿಂಚಣಿ ದೊರೆಯು ಸಾಧ್ಯತೆಗಳಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಲಯದ ಮುಖ್ಯ ಸಿಬ್ಬಂದಿ ಅಧಿಕಾರಿ ಶುಜಾ ಮಹಮೂದ್, ಸಿಪಿಆರ್‌ಒ ಮಂಜುನಾಥ ಕನಮಡಿ, ಪಿಆರ್‌ಒ ರಾಧಾರಾಣಿ ಇತರರಿದ್ದರು.