ಸಾರಾಂಶ
ಹಿರೇಕೆರೂರು ತಾಲೂಕಿನಲ್ಲಿ ನಾಲ್ಕೈದು ದಿವಸಗಳ ಹಿಂದೆ ಉತ್ತಮವಾದ ಮಳೆ ಸುರಿದಿರುವುದರಿಂದ ಎರಡ್ಮೂರು ದಿವಸಗಳಿಂದ ತಾಲೂಕಿನಲ್ಲಿ ಮುಂಗಾರು ಬೀಜ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರು
ತಾಲೂಕಿನಲ್ಲಿ ನಾಲ್ಕೈದು ದಿವಸಗಳ ಹಿಂದೆ ಉತ್ತಮವಾದ ಮಳೆ ಸುರಿದಿರುವುದರಿಂದ ಎರಡ್ಮೂರು ದಿವಸಗಳಿಂದ ತಾಲೂಕಿನಲ್ಲಿ ಮುಂಗಾರು ಬೀಜ ಬಿತ್ತನೆ ಕಾರ್ಯ ಚುರುಕುಗೊಂಡಿದೆ.ಮಳೆ, ಮೋಡದ ವಾತಾವರಣವಿದ್ದು, ಗೋವಿನ ಜೋಳ ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ. ಕೆಲವು ರೈತರು ಉಳುಮೆ ಮಾಡಿ ಬಿತ್ತನೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಮುಂಗಾರು ಪೂರ್ವದಲ್ಲಿ ಮೂರು ಬಾರಿ ಮಳೆಯಾಗಿದೆ. ಬಿತ್ತನೆಗೆ ಹದ ಇರುವುದರಿಂದ ರೈತರು ದೇವರ ಮೇಲೆ ಭಾರ ಹಾಕಿ ಟ್ರ್ಯಾಕ್ಟರ್ ಹಾಗೂ ಎತ್ತುಗಳ ಸಹಾಯದಿಂದ ಬಿತ್ತನೆ ಮಾಡುತ್ತಿದ್ದಾರೆ.ಹಿರೇಕೆರೂರು ತಾಲೂಕಿನಲ್ಲಿ ೫೬,೦೦೦ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, ೪೯,೦೦೦ ಹೆಕ್ಟೇರ್ ಭೂ ಪ್ರದೇಶ ಒಣ ಬೇಸಾಯ, ೭೦೦೦ ಹೆಕ್ಟೇರ್ ಭೂ ಪ್ರದೇಶ ನೀರಾವರಿ ಇದೆ. ಈ ಬಾರಿ ಉತ್ತಮ ಬೆಲೆ ಸಿಕ್ಕಿರುವುದರಿಂದ ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹತ್ತಿ, ಶೇಂಗಾ, ಸೋಯಾಬೀನ್, ಹೈಬ್ರೀಡ್ ಜೋಳ ಸೇರಿದಂತೆ ದ್ವಿದಳ ಧಾನ್ಯ ಬೆಳೆಯಲು ರೈತರು ಆಸಕ್ತಿ ತೋರಿಸಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಆದರೆ ಮಾಸಾಂತ್ಯದಲ್ಲೇ ಉತ್ತಮ ಮಳೆ ಸುರಿಯುತ್ತಿರುವುದರಿಂದ ಈ ಬಾರಿ ಉತ್ತಮ ಮುಂಗಾರಿನ ಆಶಾಭಾವದಲ್ಲಿದ್ದಾರೆ.ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನಲ್ಲಿ ಒಟ್ಟು ೩ ರೈತ ಸಂಪರ್ಕ ಕೇಂದ್ರಗಳಲ್ಲಿ, ಹಿರೇಕೆರೂರ, ರಟ್ಟಿಹಳ್ಳಿ, ಹಳೂರು, ತಡಕನಹಳ್ಳಿ, ಮಾಸೂರು, ಚಿಕ್ಕೆರೂರು, ಕೋಡ, ಹಂಸಭಾವಿ ರೈತ ಸಂಪರ್ಕ ಕೇಂದ್ರ ಉಪಕೇಂದ್ರಗಳಲ್ಲಿ ಬೀಜ, ರಸಗೊಬ್ಬರ ವಿತರಣೆ ನಡೆದಿದೆ.
ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಕಡ್ಡಾಯವಾಗಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಖರೀದಿಸಿದ ಬಗ್ಗೆ ಬಿಲ್ಲುಗಳನ್ನು ನೀಡಬೇಕು. ರಸಗೊಬ್ಬರಗಳನ್ನು ಎಂ.ಆರ್.ಪಿ ದರದಲ್ಲಿ ಮಾರಾಟ ಮಾಡಬೇಕು. ಕಳಪೆ ಬೀಜಗಳ ಮಾರಾಟ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಹೇಳಿದರು.