ವರದಿಗಾರರ ಕೂಟಕ್ಕೆ ಜಾಗ: ಸಭೆಯಲ್ಲಿ ಗಂಭೀರ ಚರ್ಚೆ

| Published : Feb 06 2025, 11:45 PM IST

ವರದಿಗಾರರ ಕೂಟಕ್ಕೆ ಜಾಗ: ಸಭೆಯಲ್ಲಿ ಗಂಭೀರ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಒತ್ತಾಸೆಯಂತೆ ಪಾಲಿಕೆಗೆ ಸೇರಿದ ಕೆಂಪು ಕಟ್ಟಡ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಪಾಲಿಕೆ ಕಾಂಗ್ರೆಸ್ ಸದಸ್ಯರಾದ ಸುರಭಿ ಎಸ್.ಶಿವಮೂರ್ತಿ, ಅಬ್ದುಲ್ ಲತೀಫ್‌, ಎ.ನಾಗರಾಜ, ಜಿ.ಎಸ್. ಮಂಜುನಾಥ ಗಡಿಗುಡಾಳ ಧ್ವನಿಗೂಡಿಸಿದಾಗ ಕಾಂಗ್ರೆಸ್ ಸದಸ್ಯರ ಜೊತೆಗೆ ವಿಪಕ್ಷ ಬಿಜೆಪಿ ಸದಸ್ಯರೂ ಧ್ವನಿಗೂಡಿಸಿದರು.

- ಕುವೆಂಪು ಭವನದ ಬಳಿ ಜಾಗ ನೀಡುವುದಾಗಿ ಪಾಲಿಕೆ ಆಯುಕ್ತೆ ಹೇಳಿಕೆ

- - - - ಸಚಿವ-ಸಂಸದರ ಜೊತೆ ಚರ್ಚಿಸಿ, ಮುಂದಿನ ಹೆಜ್ಜೆ: ವರದಿಗಾರರ ಕೂಟ - ಕೂಟದ ಕಟ್ಟಡ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ ಘೋಷಿಸಿದ ಸುರಭಿ ಶಿವಮೂರ್ತಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಒತ್ತಾಸೆಯಂತೆ ಪಾಲಿಕೆಗೆ ಸೇರಿದ ಕೆಂಪು ಕಟ್ಟಡ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಪಾಲಿಕೆ ಕಾಂಗ್ರೆಸ್ ಸದಸ್ಯರಾದ ಸುರಭಿ ಎಸ್.ಶಿವಮೂರ್ತಿ, ಅಬ್ದುಲ್ ಲತೀಫ್‌, ಎ.ನಾಗರಾಜ, ಜಿ.ಎಸ್. ಮಂಜುನಾಥ ಗಡಿಗುಡಾಳ ಧ್ವನಿಗೂಡಿಸಿದಾಗ ಕಾಂಗ್ರೆಸ್ ಸದಸ್ಯರ ಜೊತೆಗೆ ವಿಪಕ್ಷ ಬಿಜೆಪಿ ಸದಸ್ಯರೂ ಧ್ವನಿಗೂಡಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಕೆ.ಚಮನ್ ಸಾಬ್ ಬಜೆಟ್ ಮಂಡನೆ ನಂತರ ನಡೆದ ಚರ್ಚೆಯಲ್ಲಿ ವರದಿಗಾರರ ಕೂಟ 18 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದ್ದು, ಶಾಶ್ವತ ಜಾಗ ದೊರಕಿಸುವ ನಿಟ್ಟಿನಲ್ಲಿ ಈಚೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮೇಯರ್ ಕೆ.ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಕೆಂಪು ಕಟ್ಟಡ ಸಹ ವೀಕ್ಷಿಸಿದ್ದಾರೆ. ಪಕ್ಷಾತೀತವಾಗಿ ಸದಸ್ಯರು ವರದಿಗಾರರ ಕೂಟಕ್ಕೆ ಜಾಗ, ಕಟ್ಟಡ ನೀಡಲು ಸಮ್ಮತಿಸಿದ್ದು, ಮೇಯರ್ ಸಹ ಈ ಬಗ್ಗೆ ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು. ಅದಕ್ಕೆ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ, ಸದಸ್ಯರಾದ ಎಸ್.ಟಿ.ವೀರೇಶ, ಕೆ.ಎಂ.ವೀರೇಶ, ಆರ್.ಶಿವಾನಂದ ದನಿಗೂಡಿಸಿದರು.

ಆದರೆ, ಆಯುಕ್ತೆ ರೇಣುಕಾ ಮಾತನಾಡಿ, ಇದು ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡವಾಗಿದೆ. ಯಾರಿಗೂ ನೀಡಲು ಬರುವುದಿಲ್ಲ. ಕುವೆಂಪು ಕನ್ನಡ ಭವನ ಪಕ್ಕದಲ್ಲಿ 40-60 ನಿವೇಶನ ಇದೆ. ಅದನ್ನು ಬೇಕಿದ್ದರೆ ಕಾನೂನಾತ್ಮಕವಾಗಿ ನೀಡಲು, ಕಟ್ಟಡಕ್ಕೆ ಪಾಲಿಕೆಯಿಂದ ಅನುದಾನ ನೀಡುವುದಾಗಿ ಹೇಳಿದರು.

ಇದೇ ವೇಳೆ ಸುರಭಿ ಶಿವಮೂರ್ತಿ, ಹಾಲುಮತ (ಕುರುಬ) ಸಮಾಜದ ನನ್ನಿಂದಲೇ ವರದಿಗಾರರ ಕೂಟದ ಕಟ್ಟಡ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ ನೀಡುವೆ ಎಂದು ಘೋಷಿಸಿದರು. ಯುವ ಸದಸ್ಯ ಎಲ್.ಎಂ.ಎಚ್‌. ಸಾಗರ್‌, ಇತರೆ ಸದಸ್ಯರು ಸಹ ಪಕ್ಷಾತೀತವಾಗಿ ಕೈ ಜೋಡಿಸುವ ಭರವಸೆ ನೀಡಿದರು.

ಕೆಲ ಸದಸ್ಯರು ಕುವೆಂಪು ಭವನಕ್ಕಿಂತ ಕೆಂಪು ಕಟ್ಟಡವೇ ಸೂಕ್ತವಾಗಿದ್ದು, ಈ ಬಗ್ಗೆ ಸಚಿವರು, ಸಂಸದರ ಜೊತೆಗೆ ನಾವೂ ಚರ್ಚಿಸುವುದಾಗಿ ಪ್ರತಿಕ್ರಿಯಿಸಿದರು. ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ ಪಾಲಿಕೆ ಸದಸ್ಯರ ಪಕ್ಷಾತೀತ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದರು.

ವರದಿಗಾರರ ಕೂಟ ಪ್ರತಿಕ್ರಿಯೆ:

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಗೆ ಬಂದ ನಂತರವಷ್ಟೇ ಈ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ. ವರದಿಗಾರರ ಕೂಟ ಸುಲಭವಾಗಿ ಜನರಿಗೆ ಸಿಗುವಂತೆ, ನಗರದ ಎಲ್ಲ ಭಾಗದಿಂದಲೂ ಸಮೀಪವಿರುವಂತೆ ಇರಬೇಕು ಎಂಬುದು ಸ್ವತಃ ಸಚಿವರ ಉದ್ದೇಶ. ಹಾಗಾಗಿಯೇ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜೊತೆಗೆ ಚರ್ಚಿಸಿ, ಮುಂದುವರಿಯುವುದಾಗಿ ಕೂಟ ತಿಳಿಸಿದೆ.

- - - (ಸಾಂದರ್ಭಿಕ ಚಿತ್ರ)