ಕಾಂಗ್ರೆಸ್‌ ಕಚೇರಿಗೆ ಜಾಗೆ: ತೀವ್ರ ವಾಗ್ವಾದ

| Published : Nov 30 2024, 12:48 AM IST

ಸಾರಾಂಶ

ಪಾಲಿಕೆಯಿಂದ ಕಾಂಗ್ರೆಸ್‌ ಕಚೇರಿಗೆ ಜಾಗ ಕೊಡುವ ವಿಷಯವಾಗಿ ಆಡಳಿತಾರೂಢ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ವಾಗ್ವಾದ ನಡೆಯಿತು. ಮೀನಿನ ಮಾರುಕಟ್ಟೆಯಂತೆ ಸಭೆ ಆಗಿದ್ದರಿಂದ ಕೆಲಕಾಲ ಸಭೆಯನ್ನೇ ಮುಂದೂಡಲಾಯಿತು.

ಹುಬ್ಬಳ್ಳಿ: ಪಾಲಿಕೆಯಿಂದ ಕಾಂಗ್ರೆಸ್‌ ಕಚೇರಿಗೆ ಜಾಗ ಕೊಡುವ ವಿಷಯವಾಗಿ ಆಡಳಿತಾರೂಢ ಹಾಗೂ ಪ್ರತಿಪಕ್ಷದ ನಡುವೆ ತೀವ್ರ ವಾಗ್ವಾದ ನಡೆಯಿತು. ಮೀನಿನ ಮಾರುಕಟ್ಟೆಯಂತೆ ಸಭೆ ಆಗಿದ್ದರಿಂದ ಕೆಲಕಾಲ ಸಭೆಯನ್ನೇ ಮುಂದೂಡಲಾಯಿತು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ, 2988 ಚದುರ ಮೀಟರ್‌ ಜಾಗೆಯನ್ನು ಕಾಂಗ್ರೆಸ್‌ ಕಚೇರಿಗಾಗಿ ನೀಡುವ ಕುರಿತು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ವಿಷಯ ಪಟ್ಟಿಯಲ್ಲಿ ಸೇರಿಸಿಲ್ಲವೇಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡಬೇಕು ಎಂದರು.

ಅದಕ್ಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, 2003ರಲ್ಲೂ ಬಿಜೆಪಿ ಕಚೇರಿಗೆ ನಿವೇಶನ ಕೇಳಿ ಮನವಿ ಬಂದಿತ್ತು. ಆಗ ಯಾವುದೇ ರಾಜಕೀಯ ಪಕ್ಷಕ್ಕೆ ಜಾಗೆ ನೀಡಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಜತೆಗೆ ಸರ್ಕಾರ ಕೂಡ ರಾಜಕೀಯ ಪಕ್ಷಗಳಿಗೆ ಜಾಗೆ ನೀಡಬಾರದು ಎಂದು ಸರ್ಕಾರಿ ಆದೇಶವಿದೆ ಎಂದರು. ಯಾವ ಕಾನೂನಿನಲ್ಲಿ ಜಾಗೆ ಕೊಡಬಹುದು ಎಂಬುದನ್ನು ತಿಳಿಸಲಿ ಎಂದು ಪ್ರತಿಪಕ್ಷದ ಸದಸ್ಯರನ್ನು ಛೇಡಿಸಿದರು.

ಅದಕ್ಕೆ ಕಿಡಿಕಿಡಿಯಾದ ಪ್ರತಿಪಕ್ಷದ ಸದಸ್ಯರೆಲ್ಲರೂ, ಮೇಯರ್‌ ಪೀಠದ ಮುಂದೆ ತೆರಳಿ ವಾಗ್ವಾದಕ್ಕಿಳಿದರು. ಈ ವೇಳೆ ಆಡಳಿತಾರೂಢ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಚಕಮಕಿ ನಡೆಯಿತು. ಪ್ರತಿಪಕ್ಷದ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ, ಯಾವ ಕಾನೂನಿನಲ್ಲಿ ಕೊಡಬಾರದೆಂಬ ನಿಯಮವಿದೆ ಎಂಬುದನ್ನು ತಿಳಿಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೂಡ ತಿಳಿಯದಂತಾಗಿ ಗೊಂದಲ ನಿರ್ಮಾಣವಾಯಿತು. ಕೊನೆಗೆ ಮೇಯರ್‌, 10 ನಿಮಿಷಗಳ ಕಾಲ ಸಭೆಯನ್ನು ಮುಂದೂಡಿದರು.

ಬಳಿಕ ಶುರುವಾದ ಸಭೆಯಲ್ಲಿ ಮೇಯರ್‌, 2003ರಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದ ಸರ್ಕಾರ ಇದ್ದಾಗ ಈ ಸಂಬಂಧ ಸುತ್ತೊಲೆ ಹೊರಡಿಸಿದೆ. ಆಗ ಈಗಿನ ಡಿಸಿಎಂ ಡಿ.ಕೆ. ಶಿವಕುಮಾರ ಅವರೇ ನಗರಾಭಿವೃದ್ಧಿ ಸಚಿವರಿದ್ದರು. ರಾಜಕೀಯ ಪಕ್ಷಗಳಿಗೆಲ್ಲ ಜಾಗೆ ನೀಡಬಾರದು ಎಂಬ ಸುತ್ತೊಲೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಚೇರಿಗೆ ಜಾಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ರೂಲಿಂಗ್‌ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.

ಪೌರಕಾರ್ಮಿಕರಿಗೆ ಪಗಾರ

ಪೌರಕಾರ್ಮಿಕರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಪಗಾರ ಕೊಡುತ್ತಿಲ್ಲ ಏಕೆ? ಅವರಿಗೆ ಪ್ರತಿತಿಂಗಳು ಐದನೆಯ ತಾರೀಖಿನೊಳಗೆ ಸಂಬಳ ಕೊಡುವಂತಾಗಬೇಕು. ಪಾಲಿಕೆ ಅಧಿಕಾರಿಗಳೇಕೆ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಭಾನಾಯಕ ತಿಪ್ಪಣ್ಣ ಮಜ್ಜಗಿ ಪ್ರಶ್ನಿಸಿದರು.

ಅದಕ್ಕೆ ಪರಿಸರ ಅಭಿಯಂತರ ಮಲ್ಲಿಕಾರ್ಜುನ, ನೇರ ವೇತನ ಪಾವತಿ ಹಾಗೂ ಕಾಯಂ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಸಿಗುತ್ತಿದೆ. ಹೊರಗುತ್ತಿಗೆ ನೌಕರರಿಗೆ ಗುತ್ತಿಗೆದಾರರೇ ನೀಡಬೇಕು. ಅದು ಸರಿಯಾಗಿ ನೀಡುತ್ತಿಲ್ಲವಷ್ಟೇ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕಾರ್ಮಿಕರ ಯಾವ್ಯಾವ ಬೇಡಿಕೆಗಳನ್ನು ಪಾಲಿಕೆ ಈಡೇರಿಸಿದೆ. ಯಾವ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು.

ಅದಕ್ಕೆ ಮಜ್ಜಗಿ, ಎಲ್ಲ ಕಾರ್ಮಿಕರಿಗೂ 5ನೆಯ ತಾರೀಖಿನೊಳಗೆ ಸಂಬಳ ಸಿಗುವಂತೆ ನೋಡಿಕೊಳ್ಳುವುದು ಪಾಲಿಕೆ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮೇಯರ್‌ ಬಡಿಗೇರ, ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.