ರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಭಾಷಣ

| Published : Sep 04 2025, 01:01 AM IST

ರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಭಾಷಣ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್ ಸ್ಕೌಟ್ ಆಂಡ್‌ ಗೈಡ್ಸ್‌ ವತಿಯಿಂದ ದೆಹಲಿಯ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ಭಾಗವಹಿಸಿ ಸ್ಫೂರ್ತಿಯ ಭಾಷಣ ಮಾಡಿದರು.

ಮಂಗಳೂರು: ದೆಹಲಿಯಲ್ಲಿ ನಡೆದ ಭಾರತ್ ಸ್ಕೌಟ್ ಆಂಡ್‌ ಗೈಡ್ಸ್‌ನ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ಭಾಗವಹಿಸಿದರು. ಸುಮಾರು 5,000 ಸಭಿಕರ ಸಮ್ಮುಖದಲ್ಲಿ ಅವರು ನೀಡಿದ ಸ್ಫೂರ್ತಿದಾಯಕ ಭಾಷಣ ಗಮನ ಸೆಳೆಯಿತು.

ಸ್ಪೀಕರ್ ಮಾತನಾಡಿ, ಸ್ಕೌಟಿಂಗ್ ಮತ್ತು ಗೈಡಿಂಗ್ ಸೇವೆ, ಸಂಸ್ಕಾರ ಮತ್ತು ಸಹಯೋಗ ಎನ್ನುವ ಮೂರು ಸುಂದರ ಸಂಗಮವಾಗಿದೆ. ಈ ಮೂರು ಸ್ತಂಭಗಳು ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಬಲ ಚೌಕಟ್ಟಿನಂತೆ ಕಾರ್ಯ ನಿರ್ವಹಿಸುತ್ತವೆ. ವಿದ್ಯಾರ್ಥಿಗಳನ್ನು ಅಧ್ಯಯನ ಕೊಠಡಿಯಾಚೆಗೆ ಕರೆದೊಯ್ಯುವ, ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತಿಸುವ ಪಯಣವಾಗಿದೆ. ಭಾರತದ ನಾರಿ ಶಕ್ತಿಯನ್ನು ಪ್ರತಿನಿಧಿಸುವ ನಮ್ಮಹೆಮ್ಮೆಯ ಯುವತಿಯರು ಕೂಡ ನಾಯಕತ್ವದಲ್ಲಿ ಮುನ್ನಡೆಯುವುದು, ಅನ್ವೇಷಣೆ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿರುವುದನ್ನು ನೋಡಿ ಸಂತೋಷವಾಗಿದೆ. ನೀವು ನಿಜವಾಗಿಯೂ ಲಕ್ಷಾಂತರ ಯುವತಿಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದೀರಿ ಎಂದು ಹೇಳಿ ಸ್ಫೂರ್ತಿ ತುಂಬಿದರು.

ತಮ್ಮ ಶಾಲಾ ದಿನಗಳನ್ನು ನೆನಪಿಸಿದ ಸ್ಪೀಕರ್‌, ನಾನು 5ರಿಂದ 10ನೇ ತರಗತಿವರೆಗೆ ಸ್ಕೌಟ್‌ನಲ್ಲಿದ್ದದ್ದು ನನ್ನ ವ್ಯಕ್ತಿತ್ವವನ್ನು ಮಾತ್ರವಲ್ಲ, ಮಾನವೀಯತೆ, ಸಹನಶೀಲತೆ ಮತ್ತು ಗುರಿಯೊಂದಿಗೆ ಮುನ್ನಡೆಯುವ ನಾಯಕತ್ವ ಸಾಮರ್ಥ್ಯವನ್ನೂ ನೀಡಿತು. ಸ್ಕೌಟಿಂಗ್ ನನಗೆ ಶಿಸ್ತು, ತಂಡದಲ್ಲಿ ಕೆಲಸ ಮಾಡುವುದು, ಸಮಾಜ ಸೇವೆ, ಸವಾಲುಗಳನ್ನು ಹೇಗೆ ಎದುರಿಸುವುದು ಮತ್ತು ಕಠಿಣ ಸಂದರ್ಭಗಳಲ್ಲಿ ಶಾಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಸಿತು. ಇಂದಿನ ಸಮಾಜವು ತಪ್ಪು ಮಾಹಿತಿ, ಧ್ರುವೀಕರಣ ಮತ್ತು ಅಸಮಾನತೆಯಂತಹ ಸವಾಲುಗಳೊಂದಿಗೆ ಹೋರಾಡುತ್ತಿರುವ ಕಾಲಘಟ್ಟದಲ್ಲಿ, ಸ್ಕೌಟ್ ಗೈಡ್ಸ್ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಮುಂತಾದ ಮೌಲ್ಯಗಳೊಂದಿಗೆ ವಿದ್ಯಾರ್ಥಿ ನಾಯಕರನ್ನು ರೂಪಿಸುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ ಮಾಜಿ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ. ಕೆ.ಕೆ. ಖಂಡೇಲ್ವಾಲ್, ಛತ್ತೀಸಘಡದ ಮಾಜಿ ಸಚಿವ ಹಾಗೂ ಸಂಸದ ಬ್ರಿಜ್ ಮೋಹನ್ ಅಗರ್ವಾಲ್, ದೆಹಲಿ ಸಂಸದ ಮನೋಜ್ ತಿವಾರಿ, ಮಾಜಿ ನ್ಯಾಯಧೀಶರಾದ ಜಾವೇರಿಯ ಹಾಗೂ ಗೀತಾಂಜಲಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಹೆಚ್ಚುವರಿ ಸಹಾಯಕ ಆಯುಕ್ತ ಎಂ.ಎ ಖಾಲಿದ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ ರಾಷ್ಟೀಯ ಮಹಾ ಕಾರ್ಯಾಧ್ಯಕ್ಷ ಪಿ.ಜಿ. ಆರ್. ಸಿಂಧ್ಯಾ ಮತ್ತಿತರರು ಇದ್ದರು.