ಎಸ್ಸೆಸ್ಸೆಲ್ಸಿ ಫೇಲಾದವರಿಗೆ ವಿಶೇಷ ತರಗತಿ, ಮಕ್ಕಳ ನಿರಾಸಕ್ತಿ

| Published : May 17 2024, 12:39 AM IST

ಎಸ್ಸೆಸ್ಸೆಲ್ಸಿ ಫೇಲಾದವರಿಗೆ ವಿಶೇಷ ತರಗತಿ, ಮಕ್ಕಳ ನಿರಾಸಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಜೂನ್‌ನಲ್ಲಿ ನಡೆಯಲಿರುವ ಪರೀಕ್ಷೆ-2ಕ್ಕೆ ತಯಾರಿ ನಡೆಸಲು ಸರ್ಕಾರದ ಸೂಚನೆಯಂತೆ ವಿಶೇಷ ಪರಿಹಾರ ಬೋಧನಾ ತರಗತಿ ಜಿಲ್ಲೆಯಲ್ಲಿ ಆರಂಭವಾಗಿದೆ. ಆದರೆ, ರಜಾ ಅವಧಿಯಲ್ಲಿ ಶಾಲೆಗೆ ಬರಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಜೂನ್‌ನಲ್ಲಿ ನಡೆಯಲಿರುವ ಪರೀಕ್ಷೆ-2ಕ್ಕೆ ತಯಾರಿ ನಡೆಸಲು ಸರ್ಕಾರದ ಸೂಚನೆಯಂತೆ ವಿಶೇಷ ಪರಿಹಾರ ಬೋಧನಾ ತರಗತಿ ಜಿಲ್ಲೆಯಲ್ಲಿ ಆರಂಭವಾಗಿದೆ. ಆದರೆ, ರಜಾ ಅವಧಿಯಲ್ಲಿ ಶಾಲೆಗೆ ಬರಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.

ಇತ್ತೀಚೆಗಷ್ಟೇ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಬಂದಿದ್ದು, ಅನುತ್ತೀರ್ಣರಾದವರಿಗೆ ಮತ್ತು ಫಲಿತಾಂಶ ಸುಧಾರಣೆ ಬಯಸುವ ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ 2ನೇ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣರಾದ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಮೇ 15ರಿಂದ ಜೂ. 5ರ ವರೆಗೆ ಹೈಸ್ಕೂಲ್‌ಗಳಲ್ಲಿ 10ನೇ ತರಗತಿ ಮಕ್ಕಳಿಗೆ ವಿಶೇಷ ಪರಿಹಾರ ಬೋಧನಾ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಬುಧವಾರದಿಂದ ವಿಶೇಷ ತರಗತಿ ಶುರುವಾಗಿದೆ. ಆದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗೆ ಹಾಜರಾಗದೇ ನಿರಾಸಕ್ತಿ ತೋರಿರುವುದು ಜಿಲ್ಲೆಯಲ್ಲಿ ಕಂಡುಬಂದಿದೆ.ಅರ್ಧದಷ್ಟು ಹಾಜರಾಗಿಲ್ಲ: ಜಿಲ್ಲೆಯ 282 ಪ್ರೌಢಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿ ಆರಂಭಿಸಲಾಗಿದೆ. ಕಳೆದ ವಾರ್ಷಿಕ ಪರೀಕ್ಷೆಯಲ್ಲಿ 4,798 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅವರೊಂದಿಗೆ 217 ವಿದ್ಯಾರ್ಥಿಗಳು ಫಲಿತಾಂಶ ಸುಧಾರಣೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಅವರ ಪೈಕಿ ಗುರುವಾರ ಅನುತ್ತೀರ್ಣರಾದವರಲ್ಲಿ ಕೇವಲ 2088 ಮಕ್ಕಳು ಹಾಗೂ ಫಲಿತಾಂಶ ಸುಧಾರಣೆಗೆ ನೋಂದಾಯಿಸಿಕೊಂಡವರಲ್ಲಿ 125 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಬಂದಿದ್ದಾರೆ. ಅಂದರೆ ಅನುತ್ತೀರ್ಣರಾದವರಲ್ಲಿ ಅರ್ಧದಷ್ಟು ಮಕ್ಕಳು ಕೂಡ ರಜಾ ದಿನಗಳ ತರಗತಿಗೆ ಬಂದಿಲ್ಲ. ಬುಧವಾರ ಶೇ. 24ರಷ್ಟು ಮಕ್ಕಳು ಮಾತ್ರ ತರಗತಿಗೆ ಬಂದಿದ್ದರು. ವಿಶೇಷ ತರಗತಿಗೆ ನಿಯೋಜಿಸಿರುವ 1598 ಶಿಕ್ಷಕರಲ್ಲಿ 1475 ಶಿಕ್ಷಕರು ಮಾತ್ರ ಹಾಜರಾಗಿದ್ದಾರೆ. ಜಿಲ್ಲೆಯ 51 ಪ್ರೌಢಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವುದರಿಂದ ಅಂತಹ ಶಾಲೆಗಳಲ್ಲಿ ಈ ವಿಶೇಷ ತರಗತಿ ನಡೆಸುತ್ತಿಲ್ಲ. ಆ ಶಾಲೆಗಳ ಶಿಕ್ಷಕರಿಗೂ ರಜಾ ಅವಧಿಯ ತರಗತಿಯಿಂದ ವಿನಾಯಿತಿ ಸಿಕ್ಕಂತಾಗಿದೆ. ಸಮಸ್ಯೆ ಹಲವು: ಬೇಸಿಗೆ ರಜಾ ದಿನಗಳಾದ್ದರಿಂದ ವಿದ್ಯಾರ್ಥಿಗಳಲ್ಲಿ ಅನೇಕರು ಬೇರೆ ಊರಿಗೆ ಹೋಗಿದ್ದಾರೆ. ಅವರನ್ನು ಕರೆತರುವುದು ಕಷ್ಟಕರವಾಗಿದೆ. ಅಲ್ಲದೇ ಹಾಸ್ಟೆಲ್‌ಗಳಲ್ಲಿದ್ದ ಮಕ್ಕಳಿಗೆ ಈಗ ಶಾಲೆಗೆ ಬರುವುದು ಸಮಸ್ಯೆಯಾಗಿದೆ. ಹಾಸ್ಟೆಲ್‌ಗಳಲ್ಲಿ ವಸತಿ, ಊಟದ ವ್ಯವಸ್ಥೆ ಮಾಡದ್ದರಿಂದ ಅಂತಹ ಮಕ್ಕಳು ವಿಶೇಷ ತರಗತಿಗೆ ಬರುತ್ತಿಲ್ಲ. ಅಲ್ಲದೇ ಕೆಲವು ಮಕ್ಕಳಿಗೆ ಪೂರಕ ಪರೀಕ್ಷೆಗಾಗಿ ವಿಶೇಷ ತರಗತಿ ನಡೆಸುತ್ತಿರುವ ಮಾಹಿತಿಯೂ ಇಲ್ಲ. ಇಲಾಖೆಯ ದಿಢೀರ್‌ ನಿರ್ಧಾರದಿಂದ ಶಿಕ್ಷಕರೊಂದಿಗೆ ಮಕ್ಕಳಿಗೂ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.ಶಿಕ್ಷಕರಿಂದಲೂ ಆಕ್ಷೇಪ: ಬೇಸಿಗೆ ರಜಾ ಅವಧಿಯಲ್ಲಿ ದಿಢೀರ್‌ ಆಗಿ ವಿಶೇಷ ತರಗತಿ ನಡೆಸುವಂತೆ ಆದೇಶ ಬಂದಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವು ಶಿಕ್ಷಕರು ಪೂರ್ವ ನಿಗದಿಯಿಂದ ಪ್ರವಾಸ, ಸಮಾರಂಭಗಳಿಗೆ ಬೇರೆ ಊರುಗಳಿಗೆ ಹೋಗಿದ್ದು, ತಕ್ಷಣ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ರಣಬಿಸಿಲು ಇರುವುದರಿಂದ ಈ ಸಂದರ್ಭದಲ್ಲಿ ಶಾಲೆಗೆ ಹೋಗಲು ಶಿಕ್ಷಕರು ಮಾನಸಿಕವಾಗಿ ತಯಾರಿಲ್ಲ. ಆದರೂ ಇಲಾಖೆ ಆದೇಶದಂತೆ ಎರಡು ದಿನಗಳಿಂದ ಶಿಕ್ಷಕರು ತರಗತಿ ನಡೆಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ವಿಶೇಷ ತರಗತಿ ನಡೆಸಲಾಗುತ್ತಿದೆ.

ಆದರೆ, ವಿಶೇಷ ತರಗತಿಯ ಬಗ್ಗೆ ಅನೇಕ ಮಕ್ಕಳು, ಪಾಲಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ನಡೆಯುವುದರಿಂದ ಕಳೆದ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪರಿಹಾರ ಬೋಧನೆಯಿಂದ ಅನುಕೂಲವಾಗಿದೆ. ಇಲ್ಲದಿದ್ದರೆ ರಜೆಯಲ್ಲಿ ಮಕ್ಕಳಿಗೆ ಓದಲು ಆಗುತ್ತಿರಲಿಲ್ಲ. ಈಗ ಶಾಲೆಯಲ್ಲೇ ಬೋಧನೆ ನಡೆಯುವುದರಿಂದ ಬರುವ ಪರೀಕ್ಷೆ ಎದುರಿಸಲು ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾದ ಮಕ್ಕಳಿಗಾಗಿ ವಿಶೇಷ ಪರಿಹಾರ ಬೋಧನಾ ತರಗತಿಯನ್ನು ಬುಧವಾರದಿಂದ ಆರಂಭಿಸಲಾಗಿದೆ. ಮೊದಲ ದಿನಕ್ಕಿಂತ ಗುರುವಾರ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ರಜೆಗೆ ಹೋಗಿದ್ದ ಮಕ್ಕಳನ್ನು ತರಗತಿಗೆ ಬರುವಂತೆ ಶಿಕ್ಷಕರು ಮನವೊಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಜರಾತಿ ಹೆಚ್ಚುವ ನಿರೀಕ್ಷೆಯಿದೆ ಎಂದು ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.