ರಾಮನಗರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಸೇರ್ಪಡೆ, ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು ಹಾಗೂ ಮುಕ್ತ, ನಿಷ್ಪಕ್ಷಪಾತ ಚುನಾವಣೆ ನಡೆಸಲು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಹೆಚ್ಚಿಸಲು ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುತ್ತಿದೆ ಎಂದರು.ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಎಂಬುದು ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆಯುವುದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡ ಮತದಾರರು, ವಲಸಿಗ ಮತದಾರರು ಹಾಗೂ ಎರಡೂ ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವಂತಹ ಮತದಾರರು ಹಾಗೂ ಭಾರತೀಯ ನಾಗರೀಕರಲ್ಲದವರಿಗೆ ಮತದಾನದ ಹಕ್ಕು ಇಲ್ಲದ ಕಾರಣ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಹಾಕುವುದಾಗಿದೆ ಎಂದು ತಿಳಿಸಿದರು.
2026ರ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವನ್ನಾಗಿ ಮಾನದಂಡವನ್ನಾಗಿಟ್ಟುಕೊಂಡು ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಜೂನ್ 20 ರಿಂದ 29ರವರೆಗೆ ತರಬೇತಿ, ನಮೂನೆ ಮುದ್ರಣ ಕಾರ್ಯ ನಡೆಯಲಿದೆ. ಜೂನ್ 30 ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ–ಮನೆಗೆ ಭೇಟಿ ನೀಡಲಿದ್ದಾರೆ.ಅ.7ರಂದು ಅಂತಿಮ ಪಟ್ಟಿ ಪ್ರಕಟ:
ಮತಗಟ್ಟೆಗಳ ಪುನರ್ ವಿಂಗಡಣೆ ಪ್ರಕ್ರಿಯೆ ಜುಲೈ 29ರೊಳಗೆ ಪೂರ್ಣಗೊಳ್ಳಲಿದೆ. ಆ.5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆ.5ರಿಂದ ಸೆ.4ರವರೆಗೆ ಹಕ್ಕು ಹಾಗೂ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶವಿದೆ. ಆ.5 ರಿಂದ ಅ.3ರವರೆಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಯಶವಂತ್ ವಿವರಿಸಿದರು.
ಈ ಕಾರ್ಯಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಶುರುವಾಗಿದ್ದು, ಅದು ಶೇ. 90.47ರಷ್ಟು ಕಾರ್ಯ ಪೂರ್ಣಗೊಂಡಿದೆ. ಅಂದರೆ ಜಿಲ್ಲೆಯ 9,39,081 ಮತದಾರರ ಪೈಕಿ 8,49,572 ಮತದಾರರ ಮ್ಯಾಪಿಂಗ್ ಕಾರ್ಯ ಮಾಡಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದ್ದು, ಅಥವಾ ಅವರ ತಂದೆ ಅಥವಾ ಅಜ್ಜ ಅಥವಾ ಸಂಬಂಧಿಕರ ಹೆಸರಿದ್ದರೆ ಮಾತ್ರ ಮ್ಯಾಪಿಂಗ್ ಕಾರ್ಯ ಸಾಧ್ಯ, ಈ ರೀತಿಯ 100 ರಲ್ಲಿ 90 ಜನರ ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿ.ಎಲ್.ಒ ಗಳು ಪ್ರತಿ ಮನೆಗಳಿಗೆ ಭೇಟಿನೀಡಿ ಮತದಾರರಿಗೆ ನಕಲು ಪ್ರತಿಗಳಲ್ಲಿ ಗಣತಿ ನಮೂನೆ ಪ್ರತಿಯನ್ನು ವಿತರಿಸಲಿದ್ದಾರೆ. ಎರಡನೇ ಭೇಟಿಯಲ್ಲಿ ಬಿ.ಎಲ್.ಒಗಳು ಮತದಾರರು ಭರ್ತಿ ಮಾಡಿದ ಫಾರಂ ಅನ್ನು ಸಂಗ್ರಹಿಸಿ ಸ್ವೀಕೃತಿ ನೀಡುತ್ತಾರೆ. ಮತದಾರರು ಹಿಂದಿನ ಎಸ್.ಐ.ಆರ್‌ನ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ಒದಗಿಸಬೇಕು. ಹಿಂದಿನ ಎಸ್.ಐ.ಆರ್ ಮಾಹಿತಿಯನ್ನು https://voters.eci.gov.in ರಲ್ಲಿ ಪಡೆಯಬಹುದು.ಬಿ.ಎಲ್.ಒಗಳು ಮತದಾರರಿಂದ ಫಾರಂ ಸಂಗ್ರಹಿಸಲು ಮೂರು ಬಾರಿ ಭೇಟಿ ನೀಡಲಿದ್ದಾರೆ. ಮನೆ ಬೀಗ ಹಾಕಿದ್ದರೆ ಫಾರಂ ಅನ್ನು ಮನೆಗೆ ಅಂಟಿಸಲಾಗುತ್ತದೆ, ನೆರೆ ಹೊರೆಯವರ ಸಹಾಯ ಪಡೆದು ಮನೆಯ ಮಾಲೀಕರನ್ನು ಸಂಪರ್ಕಿಸುವ ಯತ್ನ ಮಾಡಲಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಹಾಗೂ ಫಾರಂಗಳನ್ನು ಸ್ವೀಕರಿಸದಿದ್ದಲ್ಲಿ ಮತದಾರರನ್ನು ಪಟ್ಟಿಯಿಂದ ಹೆಸರು ಕೈಬಿಡಲಾಗುವುದು. ಹೊಸ ಮತದಾರರು ಘೋಷಣೆಯೊಂದಿಗೆ ನಮೂನೆ 6 ಸಲ್ಲಿಸಬೇಕು ತಿಳಿಸಿದರು.
ಅರ್ಹ ಮತದಾರರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಹೆಸರು ಸೇರ್ಪಡೆಗಾಗಿ ಫಾರಂ 6 ಹಾಗೂ 8 ನೀಡಲಾಗುತ್ತದೆ. ಮತದಾರರ ಪಟ್ಟಿಯಿಂದ ಹೊರಗಿಡುವಿಕೆ, ಅಳಿಸುವಿಕೆ ಆಕ್ಷೇಪಣೆಗಳಿಗೆ ಫಾರಂ 7 ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತಿಳಿಸಿದರು.ಬಾಕ್ಸ್ ..............
ಬೂತ್ ಲೆವೆಲ್ ಏಜೆಂಟರ ನೇಮಕ:ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಸಹ ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ, ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಬೂತ್ ಲೆವೆಲ್ ಏಜೆಂಟರುಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ, ಬೂತ್ ಮಟ್ಟದ ಎಜೆಂಟರು ಬಿಎಲ್‌ಓ ಅವರೊಂದಿಗೆ ತೆರಳಿ ನೆರವು ನೀಡಬಹುದು. ಅದಕ್ಕಾಗಿ ರಾಜಕೀಯ ಪಕ್ಷಗಳು ಏಜೆಂಟರಿಗೆ ಗುರುತಿನ ಚೀಟಿ ನೀಡುತ್ತಾರೆ. ಇದರೊಂದಿಗೆ ಪ್ರತಿಯೊಂದು ಪಂಚಾಯತ್‌ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮತದಾರರ ನೆರವು ಕೇಂದ್ರಗಳನ್ನು ರಚಿಸಲಾಗುವುದು, ಅಲ್ಲಿ ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಸಂಪರ್ಕ ಒದಗಿಸಲಾಗುವುದು.
ಬಿಎಲ್‌ಓಗಳು ಅಲ್ಲಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಇದರಿಂದ ಅನುಕೂಲವಾಗಲಿದೆ. ನಾಗರೀಕರು ಕೂಡ ಅಲ್ಲಿ ಬಂದು ದಾಖಲಾತಿಗಳನ್ನು ನೀಡಬಹುದಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಸೂಕ್ಷ್ಮವಾದ ಪ್ರಕ್ರಿಯೆಯಾಗಿದ್ದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರನ್ನು ಕೈಬಿಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ.ಬಾಕ್ಸ್ ...........
ಬಿಎಲ್‌ಒಗಳಿಗೆ ದಾಖಲೆಗಳು ಸಲ್ಲಿಸಿಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಗುರುತಿನ ಚೀಟಿಗಳು ಅಂದರೆ ಕೇಂದ್ರ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನೀಡುವ ಗುರುತಿನ ಚೀಟಿಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಎಲ್‌ಐಸಿಯಿಂದ ನೀಡಿರುವ ಗುರುತಿನ ಚೀಟಿಗಳು, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ, ವಾಸದ ದೃಢೀಕರಣ ಪ್ರಮಾಣ ಪತ್ರ, ಒಬಿಸಿ, ಎಸ್‌ಸಿ ಅಥವಾ ಎಸ್‌ಟಿ ಜಾತಿ ಪ್ರಮಾಣ ಪತ್ರ, ಸರ್ಕಾರ ನೀಡಿರುವ ಭೂಮಿ ಅಥವಾ ನಿವೇಶನದ ಪ್ರಮಾಣ ಪತ್ರ ಇತ್ಯಾದಿ ದಾಖಲಾತಿಗಳನ್ನು ಸಂಬಂಧಿಸಿದವರು ಸಲ್ಲಿಸಬಹುದಾಗಿದೆ.
4ಕೆಆರ್ ಎಂಎನ್ 3.ಜೆಪಿಜಿಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.