ಕನ್ನಡಪ್ರಭ ವಾರ್ತೆ ಮಡಿಕೇರಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಹಾಗೂ ಮತಗಟ್ಟೆ ಅಧಿಕಾರಿಗಳು ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಗಣತಿ ನಮೂನೆ ನೀಡುವ ಮೂಲಕ ಮತದಾನ ಪಟ್ಟಿ ಪರಿಷ್ಕರಣೆ ಆಂದೋಲನಕ್ಕೆ ಚಾಲನೆ ನೀಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ, ನೇಮಿಸಲ್ಪಟ್ಟ ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ನಮೂನೆ ಅರ್ಜಿ ಸಲ್ಲಿಸಿ, ನಮೂನೆ ಭರ್ತಿ ಮಾಡಿ ಸಹಿ ಹಾಕಿ ಕೊಡುವುದು ಕಡ್ಡಾಯವಾಗಿದೆ. ಆ ನಿಟ್ಟಿನಲ್ಲಿ ಮತದಾರರು ಗಮನಿಸಬೇಕಿದೆ ಎಂದು ಕೋರಿದರು. ಅರ್ಜಿ ನಮೂನೆ ಕೊಡದೇ ಹೋದರೆ ಅಂತಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು. ಗಣತಿ ನಮೂನೆ ನೀಡಿ, ಪರಿಷ್ಕರಣೆ ಕುರಿತು ವಿವರಿಸಿದರು.ಒಂದು ವೇಳೆ ಮತದಾರರು ಹೊರಗೆ ಇದ್ದರೂ ಕುಟುಂಬದ ಯಾರಾದರೊಬ್ಬರೂ ತಮ್ಮ ಕುಟುಂಬದ ಎಲ್ಲ ಮತದಾರರ ಗಣತಿ ನಮೂನೆಗೆ ಸಹಿ ಹಾಕಿಕೊಡುವ ಅವಕಾಶ ಮಾಡಿಕೊಡಲಾಗಿದೆ ಎಂದರು.ಗಣತಿ ನಮೂನೆಯಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮಾಹಿತಿ ಒದಗಿಸಬೇಕು, ಬೇರೆ ಮತಕ್ಷೇತ್ರ ಅಥವಾ ಮತಗಟ್ಟೆಯಲ್ಲಿದ್ದರೆ ಅದರ ವಿವರ ಹಾಕಬೇಕು ಎಂದು ಹೇಳಿದರು.ಒಂದು ಮನೆಗೆ ಮೂರು ಬಾರಿ ಕಡ್ಡಾಯವಾಗಿ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು, ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಡಿಕೇರಿ ತಹಸೀಲ್ದಾರ್ ಶ್ರೀಧರ್ ಮಾತನಾಡಿ, ಚುನಾವಣೆ ಆಯೋಗದಿಂದ ಈಗಾಗಲೇ ಎಸ್.ಐ.ಆರ್ ಆರಂಭವಾಗಿದ್ದು, ಮತದಾರರು ಬಿಎಲ್‌ಒಗಳು ತಮ್ಮ ಮನೆಗೆ ಬಂದಾಗ ನಮೂನೆಯಲ್ಲಿ ಸೂಚಿಸಲಾದ ಮಾಹಿತಿಯನ್ನು ನೀಡುವುದರ ಜೊತೆಗೆ ಕಲರ್ ಫೋಟೋ ವನ್ನು ಅಳವಡಿಸುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.ಉಪ ತಹಸೀಲ್ದಾರ್ ಚಂದ್ರಶೇಖರ್, ಗ್ರಾಮಾಡಳಿತಾಧಿಕಾರಿ ಸಂದೀಪ್ ಶೆಣೈ, ಬೂತ್ ಮಟ್ಟದ ಅಧಿಕಾರಿ ಕೆ.ಎಸ್.ಮುತ್ತಮ್ಮ ಇತರರು ಇದ್ದರು.