ಸಾರಾಂಶ
-ಹಿಂದುಳಿದ ಹಣೆಪಟ್ಟಿಯಿಂದ ಹೊರಬರಲು ದೃಢ ಸಂಕಲ್ಪ ಮಾಡೋಣ
-------ಕನ್ನಡಪ್ರಭ ವಾರ್ತೆ ಯಾದಗಿರಿ
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದ್ದು, ಶಿಕ್ಷಕರು ವಿಶೇಷ ಕಾಳಜಿವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಆಕರ್ಷಕವಾಗಿ ಅವರ ಮನಮುಟ್ಟುವಂತೆ ಪಾಠ ಮಾಡಿ, ಮಕ್ಕಳ ಗೈರು ಹಾಜರು ತಪ್ಪಿಸಲು ಮನೆಮನೆಗೆ ಭೇಟಿ ನೀಡಿ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ನಿರ್ದೇಶಿಸಿದರು.ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯು ಕಡಿಮೆ ಫಲಿತಾಂಶ ಬರುತ್ತದೆ ಎಂಬ ಹಣೆಪಟ್ಟಿಯಿಂದ ಹೊರಬರಲು ಬೋಧನೆಗೆ ವಿಶೇಷ ಒತ್ತು ನೀಡಬೇಕು ಹಾಗೂ ಜಿಲ್ಲೆಯು ಹಿಂದುಳಿದಿದೆ ಎಂಬ ಹಣೆಪಟ್ಟಿಯಿಂದ ಹೊರಬರಲು ಸಹ ದೃಢಸಂಕಲ್ಪ ಮಾಡೋಣ ಎಂದು ಸಲಹೆ ನೀಡಿ, ಆಗಾಗ ಪಾಲಕ ಪೋಷಕರ ಸಭೆ ಮಾಡುವ ಮೂಲಕ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ವಿಶೇಷ ತರಬೇತಿ, ಗುಂಪು ಚರ್ಚೆ, ವಿದ್ಯಾರ್ಥಿಗಳ ವೈಯಕ್ತಿಕ ಕಡತ ನಿರ್ವಹಣೆ, ಪರಿಹಾರ ಬೋಧನೆ, ವಿದ್ಯಾರ್ಥಿಗಳ ಗುಂಪು ರಚಿಸ ಶಿಕ್ಷಕರಿಗೆ ದತ್ತು ನೀಡುವುದು, ‘ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ’ ಅಂಶಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.ಜಿ.ಪಂ. ಸಿಇಒ ಗರಿಮಾ ಪನ್ವಾರ ಅವರು ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಡ್ಡಾಯ ನೈಜತೆಯಿಂದ ಗುರುತಿಸಿ ಪಟ್ಟಿಯನ್ನು ಸಿದ್ಧಪಡಿಸಿ, ಅವರಿಗಾಗಿ ಒಂದು ಗಂಟೆ ವಿಶೇಷ ತರಗತಿ ಮಾಡಿ ಮತ್ತು ಡಿಜಿಟಲ್ ಪಾಠಗಳನ್ನು ಡಯಟ್ ಅಧಿಕಾರಿಗಳಿಂದ ಹಾಗೂ ಕಲಿಕಾ ಟ್ರಸ್ಟ್ ಅವರಿಂದ ಮಕ್ಕಳಿಗೆ ಉಪಯೋಗವಾಗುವಂತೆ ಕ್ರಮವಹಿಸಬೇಕು. ಈ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಉತ್ತಮ ಫಲಿತಾಂಶ ಬರುವಂತೆ ನೀವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು. ಶಿಕ್ಷಕರ ಕೊರತೆ ಇರುವ ಶಾಲೆಗಳ ಪಟ್ಟಿಯನ್ನು ಸಂಬಂಧಿಸಿದ ಅಧಿಕಾರಿಗಳು ಕ್ರೂಢೀಕರಿಸಿ ನೆರೆಹೊರೆಯ ಪ್ರೌಢಶಾಲೆಯಿಂದ ತಾತ್ಕಾಲಿಕ ನಿಯೋಜನೆಗೆ ನಿಯಮನುಸಾರ ಕ್ರಮವಹಿಸಿ ಎಂದು ಅವರು ಸೂಚಿಸಿದರು.
ಡಿಡಿಪಿಐ ಮಂಜುನಾಥ ಮಾತನಾಡಿ, ಶಾಲೆಯ ಶಿಕ್ಷಕ ವೃಂದದವರು ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಅದಕ್ಕೆ ಅನುಗುಣವಾಗಿ ಕಾರ್ಯನಿರತರಾಗಬೇಕು ಎಂದು ಮಾರ್ಗದರ್ಶನ ನೀಡಿದರು.ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಮಾತನಾಡಿ, ಮಕ್ಕಳ ನಿರಂತರ ಹಾಜರಾತಿಗಾಗಿ ಶಿಕ್ಷಕರು ಶ್ರಮವಹಿಸಬೇಕು. ನಿರಂತರ ಕಲಿಕೆ, ಮೌಲ್ಯ ಮಾಪನ ನಡೆಸಬೇಕು. ಫಲಿತಾಂಶಕ್ಕಾಗಿ ಕ್ರಿಯಾಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ನುಡಿದರು.
ಜಿಲ್ಲಾ ನೋಡಲ್ ಅಧಿಕಾರಿ ಬಸನಗೌಡ ಆಲ್ದಾಳ, ವಿಷಯ ಪರಿವೀಕ್ಷಕ ಹಣಮಂತ ಎಚ್, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಉಪ ಯೋಜನಾ ಸಮನ್ವಯ ಅಧಿಕಾರಿಗಳು, ಡಯಟ್ ನ ಉಪನ್ಯಾಸಕರು, ವಿಷಯ ಪರಿವೀಕ್ಷಕರು ಹಾಗೂ ಎಲ್ಲಾ ಶಾಲೆಯ ಮುಖ್ಯ ಗುರುಗಳು ಉಪಸ್ಥಿತರಿದ್ದರು.----
ಫೋಟೊ: 14ವೈಡಿಆರ್3 : ಯಾದಗಿರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.