ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ- ಭದ್ರಾವತಿ ನಗರಗಳನ್ನು ಹಸಿರೀಕರಣ ಮತ್ತು ಸೌಂದರ್ಯೀಕರಣಗೊಳಿಸುವ ನಿಟ್ಟಿನಲ್ಲಿ ಆಕರ್ಷಕ ವಿನ್ಯಾಸಗಳನ್ನು ತಯಾರಿಸಿ, ಸ್ಥಳೀಯ ಜನರಿಗೆ ಅನುಕೂಲವಾಗಬಹುದಾದ ವಿನ್ಯಾಸಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂದಿನ ಮೂರ್ನಾಲ್ಕು ದಶಕಗಳ ನಗರದ ಜನದಟ್ಟಣೆ, ಸಂಚಾರ, ಜನಸಂಖ್ಯಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಅಭಿವೃದ್ಧಿ ಹೊಂದಿದ ದೇಶಗಳ ಪ್ರಮುಖ ನಗರಗಳನ್ನು ಮಾದರಿಯಾಗಿಟ್ಟುಕೊಂಡು ಈ ಅಭಿವೃದ್ಧಿ ಕಾಮಗಾರಿಗಳಿಗೆ ಕೈಹಾಕಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಪ್ರಮುಖ ಬೀದಿಗಳು, ವರ್ತುಲಗಳನ್ನು ಆಕರ್ಷಕವಾಗಿರುವಂತೆ, ಎಲ್ಲೆಲ್ಲೂ ಹಸಿರು ವಾತಾವರಣ ಕಂಗೊಳಿಸುವಂತೆ, ಸ್ವಚ್ಛ- ಸುಂದರ ನಗರ ನಿರ್ಮಾಣ, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ನಡೆಯುವ ಕ್ರೌರ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸೂಡಾ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸಿದೆ ಎಂದು ಮಾಹಿತಿ ನೀಡಿದರು.ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾನಗರ ಪಾಲಿಕೆ, ಕೃಷಿ, ಕಂದಾಯ, ಅರಣ್ಯ ಇಲಾಖೆ ಸೇರಿ ನಗರದ ಪ್ರಮುಖ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅವರ ಅಮೂಲ್ಯ ಸಲಹೆ- ಸೂಚನೆ, ಅಭಿಪ್ರಾಯಗಳನ್ನು ಸಂಗ್ರಹಿಸಿರುವುದಾಗಿ ಅವರು ತಿಳಿಸಿದರು.
ನಗರಕ್ಕೆ ಹೊಂದಿಕೊಂಡಿರುವ ಆಯ್ದ ಕೆಲವು ಉದ್ಯಾನವನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸೂಡಾ ವತಿಯಿಂದ ಕಾರ್ಯಯೋಜನೆ ರೂಪಿಸಿ, ಅಭಿವೃಧ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗಿರುವ ಉದ್ಯಾನವನಗಳ ನಿರ್ವಹಣೆಗೆ ಹಲವು ಉದ್ಯಮಿಗಳು, ಸಂಸ್ಥೆಗಳು ಆಸಕ್ತಿ ತೋರಿರುವುದು ಸ್ವಾಗತಾರ್ಹ ಸಂಗತಿ ಎಂದರು.ನಗರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯಕ್ರಮದ ಭಾಗವಾಗಿ ಸೂಡಾದ ವತಿಯಿಂದ ಆರಂಬಿಕವಾಗಿ ₹1 ಕೋಟಿ ಅರಣ್ಯ ಇಲಾಖೆಗೆ ನೀಡಲಿದೆ. ಅಲ್ಲದೇ ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ, ಮೂರು ವರ್ಷಗಳ ಅವಧಿಗೆ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಲು ಒಡಂಬಡಿಕೆ ಮಾಡಿಕೊಳ್ಳಲಿದೆ. ಈ ಒಡಂಬಡಿಕೆ ಅನ್ವಯ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟು ಪೋಷಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ ಎಂದರು.
ಕೆರೆಗಳ ಅಭಿವೃದ್ಧಿಗೆ ಆದ್ಯತೆ:
ಅಂತೆಯೇ ನಗರದೊಳಗಿನ ಹಲವು ಕೆರೆಗಳ ಅಭಿವೃದ್ಧಿಗೆ ಸೂಡಾ ಗಮನಹರಿಸಿದ್ದು, ಹಲವು ಕೋಟಿ ರುಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಈ ಕೆರೆಗಳ ಒತ್ತುವರಿ ತೆರವುಗೊಳಿಸಿ, ಗಡಿ ಗುರುತಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದಲ್ಲಿ ರಕ್ಷಣಾ ಬೇಲಿ ನಿರ್ಮಿಸುವುದರೊಂದಿಗೆ ಕೆರೆಗಳ ನವ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ 15 ಕೆರೆಗಳನ್ನು ಗುರುತಿಸಲಾಗಿದೆ, ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.ಸಂಚಾರ ದಟ್ಟಣೆ ತಗ್ಗಿಸಲು ಕ್ರಮ:
ವೇಗವಾಗಿ ಬೆಳೆಯುತ್ತಿರುವ ನಗರ ಮತ್ತು ಜನಸಂಖ್ಯೆಗನುಗುಣವಾಗಿ ಪರಿಣಿತರ ಸಲಹೆ- ಸೂಚನೆಯಂತೆ ಸರ್ಕಾರದ ಅನುಮೋದನೆ ಪಡೆದು ಕಾಮಗಾರಿಗಳನ್ನು ಆರಂಭಿಸಲಾಗುವುದು. ಅದರಲ್ಲಿ ವಿಶೇಷವಾಗಿ ನಗರದಲ್ಲಿನ ವರ್ತುಲಗಳು ಜನಸಂಧಣಿಯಿಂದ ಕೂಡಿದ್ದು, ಪಾದಚಾರಿಗಳು ಆತಂಕವಿಲ್ಲದೆ ನಡೆಯದಂತಾಗಿದೆ. ಅಲ್ಲದೆ ವಾಹನಗಳ ದಟ್ಟಣೆಯಿಂದಾಗಿ ಜನಸಂಚಾರ ತ್ರಾಸದಾಯಕವಾಗಿದೆ. ಇದನ್ನು ನಿಯಂತ್ರಿಸುವಲ್ಲಿ ನಗರದ ಪ್ರಮುಖ ವರ್ತುಲಗಳಲ್ಲಿ ಸ್ಕೈವಾಕ್, ಎಸ್ಕಲೇಟರ್‌ಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ತಂತ್ರಜ್ಞರನ್ನು ಆಹ್ವಾನಿಸಿ, ಅವರ ಸೂಕ್ತ ಸಲಹೆ ಸಹಕಾರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸೂಡಾದಿಂದ ₹15 ಕೋಟಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.ವರ್ತುಲಗಳಲ್ಲಿ ಜನಸಂಧಣಿ ನಿಯಂತ್ರಿಸಲು ಪರ್ಯಾಯ ಕ್ರಮ:
ಅಲ್ಲದೇ ನಗರದ ವರ್ತುಲಗಳಲ್ಲಿ ಮಹಾನ್ ಆದರ್ಶವಾದಿಗಳ, ದೇಶೋದ್ದಾರಕರ ಪುತ್ಥಳಿಗಳನ್ನು ನಿರ್ಮಿಸಿ, ಸುತ್ತಲೂ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ವರ್ತುಲಗಳಲ್ಲಿ ಜನಸಂಧಣಿಯನ್ನು ನಿಯಂತ್ರಿಸಲು ಇರಬಹುದಾದ ಪರ್ಯಾಯ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಿದ್ದು, ಅದಕ್ಕಾಗಿ ₹8 ಕೋಟಿ ಕಾಯ್ದಿರಿಸಿದೆ. ಅವಳಿ ನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮರ್ಪಕ ನಿರ್ವಹಣೆ ಮತ್ತು ಸ್ವಚ್ಛತೆಗೂ ವಿಶೇಷ ಗಮನಹರಿಸಿದೆ. ಅದಕ್ಕಾಗಿ ಅಗತ್ಯವಿರುವ ಯಂತ್ರೋಪಕರಣಗಳನ್ನು ಸೂಡಾದಿಂದ ಖರೀದಿಸಿ, ಪಾಲಿಕೆಗೆ ಹಸ್ತಾಂತರಿಸಲಿದೆ. ಅದಕ್ಕಾಗಿ ಪ್ರತ್ಯೇಕವಾಗಿ ಹಣ ವ್ಯಯ ಮಾಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ವರ್ತುಲಗಳಲ್ಲಿ ಅಳವಡಿಸುವ ಎಸ್ಕಲೇಟರ್‌ನಂತಹ ಯಂತ್ರಗಳ ನಿರ್ವಹಣೆ ಮತ್ತು ವಿದ್ಯುತ್ ಸಂಪರ್ಕವನ್ನು ಪಾಲಿಕೆಯಿಂದಲೇ ನಿರ್ವಹಿಸುವ ಹೊಣೆಗಾರಿಕೆ ನೀಡಲಾಗುವುದು ಎಂದರು.ಕ್ಯಾಮೆರಾಗಳ ಅಳವಡಿಕೆಗಾಗಿ ₹5 ಕೋಟಿ:
ನಗರದಲ್ಲಿನ ಆಕಸ್ಮಿಕ ಅಪಘಾತಗಳು, ಅಹಿತಕರ ಘಟನೆಗಳು, ಕ್ರೌರ್ಯ ಮುಂತಾದವುಗಳನ್ನು ನಿಯಂತ್ರಿಸುವ ಭಾಗವಾಗಿ ಪ್ರಮುಖ ವರ್ತುಲಗಳು, ಜನನಿಬಿಡ ರಸ್ತೆಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ ಕೊಡುವಂತೆ ಪೊಲೀಸ್ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದೆ. ಕ್ಯಾಮೆರಾಗಳ ಅಳವಡಿಕೆಗಾಗಿ ₹5 ಕೋಟಿ ಕಾಯ್ದಿರಿಸಲಾಗಿದೆ ಎಂದರು.ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳದಲ್ಲಿ ಜಿ+7 ಮಾದರಿಯಲ್ಲಿ 1200 ಮನೆಗಳ ವಸತಿ ಸಮುಚ್ಛಯ ನಿರ್ಮಾಣಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯ ನಂತರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದ ಅವರು, ಗೋಪಿಶೆಟ್ಟಿಕೊಪ್ಪದಲ್ಲಿ 104 ಎಕರೆ ಭೂಮಿಯನ್ನು ರೈತರು ಹಸ್ತಾಂತರಿಸಲು ಆಸಕ್ತಿ ತೋರಿದ್ದರು. ಅದರಲ್ಲಿ 32 ಎಕರೆ ಜಮೀನಿನ ಮಾಲೀಕರು. ಶೇ.50: 50ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಒಡಂಬಡಿಕೆ ಮಾಡಿಕೊಟ್ಟಿರುತ್ತಾರೆ. ಕೆಲವೇ ತಿಂಗಳುಗಳಲ್ಲಿ ಸದರಿ ಬಡಾವಣೆ ನಿರ್ಮಾಣ ಕಾರ್ಯವೂ ಆರಂಭಗೊಳ್ಳುವ ಆಶಯ ತಮಗಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ಬಿ.ಆರ್.ಮಂಜುನಾಥ್, ಪ್ರವೀಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.