ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡವನ್ನು ದೇವಭಾಷೆಯನ್ನಾಗಿ ಮಾಡಿದ ಅಪ್ರತಿಮ ಶರಣ ಬಸವಣ್ಣವರು ಎಂದು ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ, ಸಾಹಿತಿ ಪ್ರೊ.ಎಸ್. ಶಿವರಾಜಪ್ಪ ಬಣ್ಣಿಸಿದರು.ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಂಜನಗೂಡು ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣ- ಕರ್ನಾಟಕದ ಸಾಂಸ್ಕೃತಿಕ ನಾಯಕ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನ ಸಾಹಿತ್ಯ ರಚನೆಯಾಗಲಿಲ್ಲ ಎಂದರೇ ಕನ್ನಡ ಸಾಹಿತ್ಯ ಬರಡಾಗುತ್ತಿತ್ತು. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗಲು ವಚನ ಸಾಹಿತ್ಯವೇ ಕಾರಣ ಎಂದರು.
ಅನುಭವ ಮಂಟಪ ಸ್ಥಾಪಿಸಿ, ಇಲ್ಲಿ ಇವ ನಮ್ಮವ, ಇವ ನಮ್ಮವ.. ಎಂದು ಎಲ್ಲರಿಗೂ ಜಾಗ ನೀಡಿದ, ಕಸ ಗುಡಿಸುವವನಿಂದ ಹಿಡಿದು ಮಹಾರಾಜರವರೆಗೆ ಎಲ್ಲರಿಗೂ ಸಮಾನವಾಗಿ ಕಂಡ ಬಸವಣ್ಣನವರು ವಿಶ್ವಗುರುವಾಗಲು, ಸಾಂಸ್ಕೃತಿಕ ನಾಯಕರಾಗಲು ಅರ್ಹರು. ಆದರೆ ಎಷ್ಟೋ ಮಂದಿ ಇವತ್ತಿಗೂ ಬಸವಣ್ಣನವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದ ಅವರು ವಿಷಾದಿಸಿದರು.ಬಸವಣ್ಣನವರ ಪಾರದರ್ಶಕತೆ ರಾಜ್ಯಕ್ಕೆ ಭೇಟಿ ನೀಡಿದ್ದ ಮಹಾತ್ಮಗಾಂಧಿ ಅವರ ಮೇಲೆ ಪರಿಣಾಮ ಬೀರಿತ್ತು. ಅಂಬೇಡ್ಕರ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಬಸವಣ್ಣವರ ಸಾಹಿತ್ಯ ಕೃತಿಗಳನ್ನು ಕೇಳಿದ್ದರು. ಏಕೆಂದರೆ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಪಾಲಕ ಮೂರ್ತಿಯಾಗಿದ್ದರು ಎಂದರು.
ಮಾನವ ಕುಲವೊಂದೆ ಎಂದು ನಂಬಿದ್ದ ಬಸವಣ್ಣನವರು ರಾಷ್ಟ್ರಕವಿ ಕುವೆಂಪು ಅವರಿಗೂ ಮೆಚ್ಚುಗೆಯಾಗಿದ್ದರು. ಹೀಗಾಗಿಯೇ ಅವರು ಸುತ್ತೂರು ಮಠದ ಅಂದಿನ ಶ್ರೀಗಳಾದ ರಾಜೇಂದ್ರ ಸ್ವಾಮಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರರನ್ನು ಕುರಿತು ಮಾತನಾಡಿದ್ದರು. ಯುಗ ಯುಗಕ್ಕೂ ಸಂದೇಶವನ್ನು ನೀಡಿದ ವ್ಯಕ್ತಿ ಬಸವಣ್ಣನವರು ಎಂದು ಅವರು ಹೇಳಿದರು.ರಾಜೇಂದ್ರ ಶ್ರೀಗಳ ಸ್ಮರಣೆ
ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಜ್ಞಾನ, ಅನ್ನ, ಅರಿವಿನ ಜ್ಯೋತಿ ಉರಿಯುತ್ತಿರಲು ರಾಜೇಂದ್ರ ಶ್ರೀಗಳು ಕಾರಣ ಎಂದು ಪ್ರೊ.ಶಿವರಾಜಪ್ಪ ಸ್ಮರಿಸಿದರು.ಅದೇ ರೀತಿ ಈಗಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ರಾಜೇಂದ್ರ ಶ್ರೀಗಳ ಮಾರ್ಗದಲ್ಲಿ ಸಾಗಿ ಲಕ್ಷಾಂತರ ಮಂದಿಯ ವಿದ್ಯಾರ್ಜನೆಗೆ ಕಾರಣಕರ್ತರಾಗಿದ್ದಾರೆ. ಐವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ, ಅವರ ಕುಟುಂಬ ಬೆಳಗುವಂತೆ ಮಾಡಿದ್ದಾರೆ ಎಂದರು.
ಹಳ್ಳಿಹಳ್ಳಿಗಳಲ್ಲಿ ರಥಯಾತ್ರೆ ನಡೆಸಿಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅವರನ್ನು ಕೇವಲ ಒಂದು ವರ್ಗದ ಧಾರ್ಮಿಕ ನಾಯಕ ಎಂದು ಬಿಂಬಿಸುವುದರಿಂದ ವಿಮೋಚನೆ ದೊರೆತಿದೆ. ಆದ್ದರಿಂದ ಈ ಬಾರಿಯ ಬಸವ ಜಯಂತಿಗೂ ಮುನ್ನಾ ಬಿರುದಾಂಕಿತವಾಗಿ ಬಸವಣ್ಣನವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು, ಹಳ್ಳಿ ಹಳ್ಳಿಗಳಲ್ಲಿ ಯಾತ್ರೆ ನಡೆಸಬೇಕು ಎಂದು ಸಲಹೆ ಮಾಡಿದರು.
ಉಪನ್ಯಾಸ ಏರ್ಪಡಿಸಿರುವ ಮೂಲಕ ಬಸವಣ್ಣನವರ ಸಂದೇಶವನ್ನು ತಲುಪಿಸಬೇಕು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಗಳು ಈ ಕಾರ್ಯ ಮಾಡಿದರೆ ಜಿಲ್ಲಾ ಘಟಕವು ಅಗತ್ಯ ನೆರವು ನೀಡಲು ಸಿದ್ಧ ಎಂದು ಅವರು ಹೇಳಿದರು.ಸರಣಿ ಉಪನ್ಯಾಸ ಮಾಲಿಕೆಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್ ಆಶಯ ಭಾಷಣ ಮಾಡಿದರು.
ಜೆಎಸ್ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ದೇವಮ್ಮ ಹೊನ್ನಪ್ಪನವರ ದತ್ತಿ, ಗೌರಮ್ಮ ವಿಶ್ರಾಂತ ಪ್ರಾಚಾರ್ಯ ಅರಳಿಕಟ್ಟೆ ಎಂ. ಬಸಪ್ಪನವರ ದತ್ತಿ ದಾನಿಗಳಾದ ಉಪನ್ಯಾಸಕ ಎಚ್. ರಾಜು ಕೆಬ್ಬೇಪುರ ಮಾತನಾಡಿದರು.ವಿದ್ಯಾರ್ಥಿನಿ ಡಿ. ನಮಿತಾ ಪ್ರಾರ್ಥಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಎನ್. ಜಯಶೀಲಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಗೂಳಪ್ಪ ಸ್ವಾಮಿ ವಂದಿಸಿದರು.
ಬಿ.ಹೇಮಾವತಿ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಬಾಬು, ವಿಶ್ರಾಂತ ಪ್ರಾಧ್ಯಾಪಕರಾದ ಸಿ. ಸುಬ್ಬಣ್ಣ, ಬಸವರಾಜು, ವಿಶ್ರಾಂತ ಪ್ರಾಂಶುಪಾಲ ಶಿವಲಿಂಗಪ್ಪ, ವಿಶ್ರಾಂತ ಉಪನ್ಯಾಸಕರಾದ ಮಾದಪ್ಪ, ಬಸವಟ್ಟಿಗೆ ಬಸವರಾಜಪ್ಪ, ಸಾಹಿತಿ ಎಸ್. ಪುಟ್ಟಪ್ಪ ಮುಡಿಗುಂಡ, ಅನುರಾಗ ಮಕ್ಕಳ ಮನೆಯ ಡಿ.ಜಿ. ಸೋಮಶೇಖರ್, ವಕೀಲ ನಂಜುಂಡಸ್ವಾಮಿ, ನಿವೃತ್ತ ಮುಖ್ಯ ಶಿಕ್ಷಕರಾದ ಅರಳಿಕಟ್ಟೆ ರಾಜಪ್ಪ, ಗುರುಮಲ್ಲಪ್ಪ ಇದ್ದರು.