ಸಾವಯವ ಕೃಷಿಗೆ ವಿಶೇಷ ಸ್ಥಾನ

| Published : Jul 07 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಾವಯವ ಕೃಷಿಗೆ ಪ್ರಸ್ತುತದಲ್ಲಿ ವಿಶೇಷ ಸ್ಥಾನ ಕೊಡಲಾಗಿದೆ. ಏಕೆಂದರೆ ಭೂಮಿಯ ಉತ್ಪಾದಕತೆ ಸಾಮರ್ಥ್ಯವು ಕುಂಠಿತವಾಗುತ್ತಿರುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತೀ ಹೆಚ್ಚಿನ ಖರ್ಚಿನಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಾವಯವ ಕೃಷಿಗೆ ಪ್ರಸ್ತುತದಲ್ಲಿ ವಿಶೇಷ ಸ್ಥಾನ ಕೊಡಲಾಗಿದೆ. ಏಕೆಂದರೆ ಭೂಮಿಯ ಉತ್ಪಾದಕತೆ ಸಾಮರ್ಥ್ಯವು ಕುಂಠಿತವಾಗುತ್ತಿರುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತೀ ಹೆಚ್ಚಿನ ಖರ್ಚಿನಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಹೇಳಿದರು.

ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಇಂಡಿ ಹಾಗೂ ಕೃಷಿ ಇಲಾಖೆ (ಆತ್ಮಾ) ಹಾಗೂ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠ, ತದ್ದೇವಾಡಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಾವಯವ ಕೃಷಿ ಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಜೀವನಾಂಶ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಲ್ಲದೆ, ಮಿಶ್ರ ಬೆಳೆ, ಪರ್ಯಾಯ ಬೆಳೆಗಳು ಹಾಗೂ ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಯಿಲ್ಲದ ಬೇಸಾಯಗಳನ್ನು ನಡೆಸಿ, ಭೂಮಿಯ ಆರೋಗ್ಯವನ್ನು ಸಹ ಕಾಪಾಡಿಕೊಂಡು ಬರಲಾಗುತ್ತಿತ್ತು ಎಂದು ಹೇಳಿದರು.ಶ್ರೀ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠ ಮಹಾಂತೇಶ ಹಿರೇಮಠ ಗುರುಗಳು ಮಾತನಾಡಿ, ಭಾರತದಲ್ಲಿ ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ರಾಸಾಯನಿಕ ಗೊಬ್ಬರಗಳ ಹಾಗೂ ಪೀಡೆನಾಶಕಗಳ ವಿವೇಚನೆರಹಿತ ಬಳಕೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುತ್ತಿವೆ ಎಂದರು.

ವಿಜ್ಞಾನಿ ಡಾ.ಪ್ರಕಾಶ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಯವ ಕೃಷಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಒಂದು ದಶಕದಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಈಗಿನ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಹೊಂದುವ ಅವಶ್ಯಕತೆ ಇದೆ. ರೈತರು ಪ್ರತಿಯೊಂದು ಹಂತದಲ್ಲಿ ಉತ್ಪಾದನಾ ಖರ್ಚನ್ನು ಕಡಿಮೆ ಮಾಡಿ, ಪರಿಸರವನ್ನು ಸಂರಕ್ಷಿಸಿ, ಉತ್ತಮ ಗುಣಮಟ್ಟದ ಆಹಾರವನ್ನು ಉತ್ಪಾದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾವಯವ ಕೃಷಿಯು ಒಂದು ಹೊಸ ಆಶಾಕಿರಣವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿದರು. ತಾಂತ್ರಿಕ ಗೋಷ್ಠಿಯಲ್ಲಿ ಡಾ.ಪ್ರಕಾಶ.ಜಿ. ಸಾವಯವ ಕೃಷಿಯಲ್ಲಿ ಬೀಜಾಮೃತ, ಜೀವಾಮೃತ, ಕೃಷಿ ಬೆಳೆಗಳ ಹೊದಿಕೆಯ ಮಹತ್ವ, ಹಸಿರಲೆ ಗೊಬ್ಬರ, ಅಂತರ ಬೆಳೆ, ಮಿಶ್ರ ಬೆಳೆಗಳ ಕುರಿತು ಮಾಹಿತಿ ಒದಗಿಸಿದರು. ಡಾ.ಪ್ರೇಮ್‌ಚಂದ್.ಯು, ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ, ಡಾ.ಬಾಲಾಜಿ ನಾಯಕ, ಸಾವಯವ ಕೃಷಿಯಲ್ಲಿ ಸಾವಯವ ಇಂಗಾಲ ಹಾಗೂ ಮಣ್ಣಿನ ಫಲವತ್ತತೆ, ಡಾ.ಪ್ರಸಾದ.ಎಂ.ಜಿ. ಸಾವಯವ ಕೃಷಿಯಲ್ಲಿ ಜಾನುವಾರುಗಳ ಪಾಲನೆ, ಎರೆಹುಳುಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಭತಗುಣಕಿ ಗ್ರಾಮದ ಪ್ರಗತಿಪರ ರೈತ ಮುದ್ದುಗೌಡ ಪಾಟೀಲ ಸಾವಯವ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸುಮಾರು 120 ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

-----

ಕೋಟ್‌

ಹಸಿರು ಕ್ರಾಂತಿಯ ಪರಿಣಾಮವಾಗಿ ರಸಗೊಬ್ಬರಗಳು ಮತ್ತು ರಾಸಾಯನಿಕಗಳು ಮಹತ್ತರ ಪಾತ್ರವಹಿಸುತ್ತಾ ಬಂದಿವೆ. ಆದರೆ, ಇಂದಿನ ದಿನಗಳಲ್ಲಿ ಇವುಗಳ ಅತಿಯಾದ ಬಳಕೆಯಿಂದ ಮಣ್ಣು, ನೀರು ಮತ್ತು ಪರಿಸರ ಮಾಲಿನ್ಯ ಹೆಚ್ಚಿ, ಕ್ರಮೇಣ ಮನುಷ್ಯನ ಆರೋಗ್ಯಕ್ಕೂ ಧಕ್ಕೆ ಬರುತ್ತಿದೆ. ಇವುಗಳಲ್ಲದೇ ಹೆಚ್ಚುತಿರುವ ರಾಸಾಯನಿಕ ಗೊಬ್ಬರಗಳ ಬೆಲೆಯು ಸಹ, ಕೃಷಿಕರಲ್ಲಿ ಮುಂದೆ ಏನು ಎಂಬ ಯೋಚನೆ ಬಂದಿದೆ. ಇದೀಗ ಸಾವಯವ ಕೃಷಿಯು ಒಂದು ಆಶಾದಾಯಕ ದಾರಿಯಾಗಿದೆ.ಡಾ.ರವೀಂದ್ರ ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕ