‘ಕಸ್ತೂರಿ ರಂಗನ್‌ ವರದಿ ಅನ್ವಯ ಪಶ್ಚಿಮಘಟ್ಟ ಭಾಗದ 10 ಜಿಲ್ಲೆಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ರಾಜ್ಯಕ್ಕೆ ಆಘಾತ ನೀಡಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕಸ್ತೂರಿ ರಂಗನ್‌ ವರದಿ ಅನ್ವಯ ಪಶ್ಚಿಮಘಟ್ಟ ಭಾಗದ 10 ಜಿಲ್ಲೆಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ರಾಜ್ಯಕ್ಕೆ ಆಘಾತ ನೀಡಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ಒತ್ತಡ ಹೇರಲು ಮುಂದಿನ ತಿಂಗಳು ಸಚಿವ ಸಂಪುಟ ಸಭೆ ನಡೆಸಿ ಅಧಿಸೂಚನೆ ವಿರುದ್ಧ ನಿರ್ಧಾರ ಮಾಡುತ್ತೇವೆ. ಜತೆಗೆ ಒಂದು ದಿನದ ವಿಶೇಷ ಅಧಿವೇಶನ ಕರೆದು ಪಶ್ಚಿಮಘಟ್ಟಗಳ ಭಾಗದ ಜನರಿಗೆ ಆಗುವ ತೊಂದರೆಗಳ ಬಗ್ಗೆ ಚರ್ಚೆ ಮಾಡಿ ಕೇಂದ್ರಕ್ಕೆ ನಿರ್ಣಯ ಮಾಡಿ ಕಳುಹಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಕ್ಕೆ ಸಂಬಂಧಿಸಿ ರಾಜ್ಯದ 10 ಜಿಲ್ಲೆಗಳನ್ನು ಒಳಗೊಂಡಿರುವ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆ ಅನ್ವಯ ಈ ಭಾಗದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ವಿದ್ಯುತ್ ಸ್ಥಾವರಗಳು, ಕಟ್ಟಡ ನಿರ್ಮಾಣಕ್ಕೆ ಮತ್ತು ಟೌನ್‌ಶಿಪ್ (ನಿರ್ದಿಷ್ಟ ಮಿತಿಗಳನ್ನು ಮೀರಿದ) ಅಭಿವೃದ್ಧಿಗಳಿಗೆ ನಿಯಂತ್ರಣ ಹೇರಲಾಗುತ್ತದೆ. ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ಜನರಿಗೆ ರಸ್ತೆ ಮತ್ತಿತರ ಗ್ರಾಮೀಣ ಮೂಲಸೌಕರ್ಯ, ಮನೆ ನಿರ್ಮಾಣ, ಪ್ರವಾಸೋದ್ಯಮ ಸೇರಿ ಎಲ್ಲದಕ್ಕೂ ನಿರ್ಬಂಧ ಉಂಟಾಗಲಿದ್ದು ಭವಿಷ್ಯದ ಜೀವನಕ್ಕೆ ತುಂಬಾ ತೊಂದರೆ ಆಗುತ್ತದೆ. ಈ ಹಿಂದೆಯೇ 2024ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಡು ಅಧಿಸೂಚನೆ ತಿರಸ್ಕರಿಸಲು ನಿರ್ಧಾರ ಮಾಡಿದ್ದರು. ಅದನ್ನು ಕೇಂದ್ರಕ್ಕೂ ಕಳುಹಿಸಿದ್ದರು. ರಾಜ್ಯದ ನಿರ್ಧಾರ ಪರಿಗಣಿಸದೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಮಾಡಿದೆ. ಇದರಿಂದ ಜನ ಆತಂಕಗೊಂಡಿದ್ದು, ಶಾಸಕರು ಸಹ ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.

ವಿರೋಧ ಮಾಡುತ್ತೇವೆ:

ರಾಜ್ಯದ ಪಾಲಿಗೆ ಆಘಾತಕಾರಿಯಾಗಿರುವ ನಿರ್ಧಾರದ ವಿರುದ್ಧ ನಮ್ಮ ವಿರೋಧ ವ್ಯಕ್ತಪಡಿಸುತ್ತೇವೆ. ಕರ್ನಾಟಕಕ್ಕೆ ಒಂದು ಬೇರೆ ರಾಜ್ಯಕ್ಕೆ ಒಂದು ನಿಯಮ ಮಾಡಿರುವುದು ತಿಳಿದುಬಂದಿದೆ. ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನರೊಂದಿಗೆ ಹಾಗೂ ತಜ್ಞರೊಂದಿಗೆ ಸಮಾಲೋಚನೆ ಮಾಡುತ್ತೇವೆ. ಪ್ರತ್ಯೇಕವಾಗಿ ಒಂದು ದಿನದ ಅಧಿವೇಶನ ಕರೆದು ಅಧಿಸೂಚನೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಶಿವಕುಮಾರ್‌ ತಿಳಿಸಿದರು.

ಜಾಗೃತಿ ಮೂಡಿಸಲು ಕ್ರಮ:

ಮುಂದಿನ ದಿನಗಳಲ್ಲಿ ಪಶ್ಚಿಮಘಟ್ಟಗಳ ಕುರಿತ ಕೇಂದ್ರದ ತೀರ್ಮಾನದ ಬಗ್ಗೆ ನಮ್ಮ ಪಕ್ಷ ಹಾಗೂ ಸರ್ಕಾರ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಕೇಂದ್ರದ ಮೇಲೆ ಒತ್ತಡ ತರಲು ಏನು ಮಾಡಬೇಕೋ ಮಾಡುತ್ತೇವೆ. ಕೇಂದ್ರ ನಮ್ಮ ಆಕ್ಷೇಪಣೆಗಳಿಗೆ ಗೌರವ ಕೊಡಬೇಕು. ಆ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನಲ್ಲಿ ಹೋರಾಡುತ್ತೇವೆ ಎಂದು ಸಿಎಂ ಶಿವಕುಮಾರ್ ತಿಳಿಸಿದರು.