ಕಸ ಎಸೆಯುವವರ ಪತ್ತೆಗೆ ವಿಶೇಷ ತಂಡ

| Published : Sep 24 2025, 01:00 AM IST

ಸಾರಾಂಶ

ಪೌರಕಾರ್ಮಿಕರು ಪ್ರತಿ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಗರಸಭೆಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಬೇಕು. ಪೌರಕಾರ್ಮಿಕರನ್ನು ಕಾಯಂ ಮಾಡಲಾಗಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳು ಸದಾ ಪೌರಕಾರ್ಮಿಕರ ಪರ ಇರುತ್ತೇವೆ. ಸಾರ್ವಜನಿಕರು ಕಸವನ್ನು ರಸ್ತೆಯಲ್ಲಿ ಎಸೆಯಬಾರದು.

ಕನ್ನಡಪ್ರಭ ವಾರ್ತೆ ಕೋಲಾರದೇವರಿಗೆ ನಮಸ್ಕಾರ ಹಾಕುವ ಬದಲು ಪೌರಕಾರ್ಮಿಕರಿಗೆ ನಮಿಸಬೇಕು. ಏಕೆಂದರೆ ನಾವೆಲ್ಲಾ ಆರೋಗ್ಯವಂತರಾಗಿರಲು ಕಾರಣ ಪೌರಕಾರ್ಮಿಕರು. ಅವರು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸದಿದ್ದರೆ ಜನರಿಗೆ ಕಾಯಿಲೆ ಬಂದು ಆಸ್ಪತ್ರೆಗಳು ಭರ್ತಿಯಾಗಿರುತ್ತಿದ್ದವು ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಗರಸಭೆಯಿಂದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಕಾರ್ಮಿಕರು ನಿತ್ಯ ನಮ್ಮ ಮನೆ ಕಸ ಸಂಗ್ರಹಿಸುತ್ತಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶ ಶುದ್ಧ ಮಾಡುತ್ತಾರೆ. ಅವರು ಮಾಡುವಷ್ಟು ಶುದ್ಧವಾದ ಕೆಲಸ ಬೇರೆ ಯಾರೂ ಮಾಡಲ್ಲ ಎಂದರು.

ಕಾರ್ಮಿಕರಿಗೆ ಆರೋಗ್ಯ ತಪಾಸಣೆ

ಪೌರಕಾರ್ಮಿಕರು ಪ್ರತಿ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಗರಸಭೆಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಬೇಕು. ಪೌರಕಾರ್ಮಿಕರನ್ನು ಕಾಯಂ ಮಾಡಲಾಗಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳು ಸದಾ ಪೌರಕಾರ್ಮಿಕರ ಪರ ಇರುತ್ತೇವೆ. ಸಾರ್ವಜನಿಕರು ಕಸವನ್ನು ರಸ್ತೆಯಲ್ಲಿ ಎಸೆಯಬಾರದು. ಮನೆಯ ಬಳಿ ಬರುವ ವಾಹನಕ್ಕೇ ನೀಡಬೇಕು. ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಕಣ್ಣಿಡಲು ಒಂದು ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನೂರು ಜನ ನೂರು ರೀತಿ ಮಾತನಾಡುತ್ತಾರೆ. ಆದರೆ, ತಾವು ಅದಕ್ಕೆಲ್ಲಾ ಕೇರ್ ಮಾಡಲ್ಲ. ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ. ಕುಡಾದಿಂದ ನಗರದಲ್ಲಿ ಎರಡು ಸರ್ಕಲ್ ಅಭಿವೃದ್ಧಿ ಮಾಡಲಾಗುವುದು. ಶ್ರೀನಿವಾಸಪುರದ ರಸ್ತೆಯ ಬಂಬೂ ಬಜಾರ್ ಸರ್ಕಲ್ ಅಭಿವೃದ್ಧಿ ಮಾಡುತ್ತೇವೆ. ಎಪಿಎಂಸಿ ಬಳಿ ಮಾಲೂರು ರಸ್ತೆಯಲ್ಲಿ ಸರ್ಕಲ್ ಅಭಿವೃದ್ಧಿ ಮಾಡುತ್ತೇವೆ. 4 ಕೋಟಿ ವೆಚ್ಚದಲ್ಲಿ ಕೋಡಿಕಣ್ಣೂರು ಕೆರೆ ಅಭಿವೃದ್ಧಿ ಮಾಡಲಾಗುವುದು. ಕೋಲಾರಮ್ಮ ದೇಗುಲ ಬಳಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಪಾದಚಾರಿ ಮಾರ್ಗ ಅಭಿವೃದ್ಧಿ ಮಾಡಿಸಲಾಗುತ್ತಿದೆ ಎಂದು ವಿವರಿಸಿದರು.ಸೌಲಭ್ಯ ಕಲ್ಪಿಸುವ ಭರವಸೆ

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೋಲಾರ ನಗರವನ್ನು ಸ್ವಚ್ಛ ನಗರ ಮಾಡಬೇಕು. ಈ ಸಂಬಂಧ ನಗರಸಭೆಯಿಂದ ಪ್ರಸ್ತಾಪ ಇಟ್ಟರೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯಿಂದ ನಾನು ಅಗತ್ಯ ಸೌಲಭ್ಯ ತಂದು ಕೊಡುತ್ತೇನೆ. ಪೌರಕಾರ್ಮಿಕರ ಏಳಿಗೆಗೆ ಸಾಕಷ್ಟು ಸವಲತ್ತುಗಳು ಇವೆ. ಅವುಗಳನ್ನು ಬಳಸಿಕೊಳ್ಳುವ ಜವಾಬ್ದಾರಿ ತಮ್ಮದು ಎಂದರು.

ಇಂದು ಪೌರಕಾರ್ಮಿಕರ ಹಬ್ಬ, ಅವರನ್ನು ಗೌರವವಾಗಿ ಕಾಣಬೇಕು. ವರ್ಷವಿಡೀ ಕೆಲಸ ಮಾಡುವ ಅವರಿಗೆ ಸಿಗುವುದೇ ಒಂದು ದಿನ. ನಾವೆಲ್ಲಾ ಹಬ್ಬ ಮಾಡುವಾಗ ಅವರು ಕಸ ಎತ್ತುವುದರಲ್ಲಿ ನಿರತರಾಗಿರುತ್ತಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಪೌರಕಾರ್ಮಿಕರನ್ನು ಕರೆಯಬೇಕಿತ್ತು. ಇವತ್ತು ಒಂದು ದಿನವಾದರೂ ಅವರಿಗೆ ಯಾವುದೇ ಕೆಲಸ ಕೊಡಬಾರದಿತ್ತು ಎಂದು ಹೇಳಿದರು.

ಪೌರಕಾರ್ಮಿಕರ ಆರೋಗ್ಯ ರಕ್ಷಣೆ

ಪೌರಕಾರ್ಮಿಕರು ಇಲ್ಲ ಎಂದರೆ ನಗರ ನೈರ್ಮಲ್ಯ ಇರಲ್ಲ. ಅನಾರೋಗ್ಯ ಕಾಡುತ್ತದೆ. ಪೌರಕಾರ್ಮಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮದು. ದೇವರಾಜು ಅರಸು ವೈದ್ಯಕೀಯ ಕಾಲೇಜಿನಲ್ಲಿ ವಿಶೇಷ ಚಿಕಿತ್ಸೆ ಬೇಕಿದ್ದರೆ ನಾನು ಮಾತನಾಡಿ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪೌರಕಾರ್ಮಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಗೆದ್ದ ಪೌರಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.

ನಗರಸಭೆ ಆಯುಕ್ತ ನವೀನ್ ಚಂದ್ರ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ನಗರಸಭೆ ಸದಸ್ಯರಾದ ಪ್ರವೀಣ್ ಗೌಡ, ರಾಕೇಶ್, ಪ್ರಸಾದ್ ಬಾಬು, ಮಂಜುನಾಥ್ ಇದ್ದರು.