ಸಾರಾಂಶ
ಸಿದ್ದಾಪುರ ಭಾಗದ ದೇವಾಲಯ, ಮಂದಿರಗಳಲ್ಲಿ ಉತ್ಸವದ ವಾತಾವರಣ ಮನೆ ಮಾಡಿತ್ತು, ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರು ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಶ್ರೀ ರಾಮ ಪ್ರಾಣ ಪ್ರತಿಷ್ಠಾ ದಿನದ ಸಂಭ್ರಮ ಹೆಚ್ಚಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಗಳಾದರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿದ್ದಾಪುರ ನೆಲ್ಯಹುದಿಕೇರಿ ಅಮ್ಮತ್ತಿ ಮಾಲ್ದಾರೆ ಪಾಲಿಬೆಟ್ಟ ಸೇರಿದಂತೆ ವಿವಿಧೆಡೆಗಳ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನಡೆದವು.ದೇಶಾದ್ಯಂತ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ಮನೆ ಮಾಡಿದ್ದು, ಸಿದ್ದಾಪುರದಲ್ಲಿ ಸಡಗರದ ವಾತಾವರಣ ಕಂಡುಬಂತು. ಜನರು ಉತ್ಸಾಹದಿಂದ ದೇವಾಲಯಗಳಿಗೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ದೇವಾಲಯ, ಮಂದಿರಗಳಲ್ಲಿ ಉತ್ಸವದ ವಾತಾವರಣ ಮನೆ ಮಾಡಿತ್ತು, ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರು ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಶ್ರೀ ರಾಮ ಪ್ರಾಣ ಪ್ರತಿಷ್ಠಾ ದಿನದ ಸಂಭ್ರಮ ಹೆಚ್ಚಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಗಳಾದರು.ವಿವಿಧೆಡೆ ವಿಶೇಷ ಆರಾಧನೆ:
ಸಿದ್ದಾಪುರದ ಮುತ್ತಪ್ಪ ಭಗವತಿ ದೇವಾಲಯ, ಶ್ರೀ ಗೌರಿಶಂಕರ ದೇವಾಲಯ, ಕರಡಿಗೊಡು ಬಸವೇಶ್ವರ ದೇವಾಲಯ, ಗೂಡುಗದ್ದೆಯ ಅಯ್ಯಪ್ಪ ಸ್ವಾಮಿ ದೇವಾಲಯಗಳಲ್ಲಿ ನೂರಾರು ಭಕ್ತರು ಬೆಳಗ್ಗೆಯಿಂದಲೆ ಪಾಲ್ಗೊಂಡು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ಶ್ರೀ ರಾಮ ನಾಮ ಸ್ತೋತ್ರವನ್ನು ಪಠಣೆ ಮಾಡುವುದರೊಂದಿಗೆ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಹಿಂದೂ ಸಂಘಟನೆಯ ಕಾರ್ಯಕರ್ತರು ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ವಾಹನಗಳೊಂದಿಗೆ ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.ಅಮ್ಮತ್ತಿ ಶ್ರೀ ಮುತ್ತಪ್ಪ ದೇವಸ್ಥಾನ ರಾಮ ಮಂದಿರ ಭಗವತಿ ದೇವಾಲಯಗಳಲ್ಲಿ ಪೂಜೆಗಳು ಹಾಗೂ ಹೋಮಗಳು ನಡೆದವು. ಮುತ್ತಪ್ಪ ದೇವಾಲಯದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಅಯೋಧ್ಯಯಲ್ಲಿ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರವನ್ನು ಪರದೆಯ ಮೂಲಕ ಭಕ್ತಾದಿಗಳಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಎಲ್ಲ ಕಡೆಗಳಲ್ಲಿ ಪಾಲ್ಗೊಂಡಿದ್ದರು.