ತಜ್ಞ ವೈದ್ಯರಿಗೆ ಶೀಘ್ರದಲ್ಲಿ ಸ್ಥಳ ನಿಯುಕ್ತಿ: ಸಚಿವ ದಿನೇಶ್ ಗುಂಡೂರಾವ್

| Published : Jul 31 2025, 12:47 AM IST

ತಜ್ಞ ವೈದ್ಯರಿಗೆ ಶೀಘ್ರದಲ್ಲಿ ಸ್ಥಳ ನಿಯುಕ್ತಿ: ಸಚಿವ ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಲಿಸ್ಟ್ ವೈದ್ಯರು ಮತ್ತು ತಜ್ಞ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಈಗಾಗಲೇ ಆಯ್ಕೆಯಾಗಿರುವವರಿಗೆ ಕೌನ್ಸೆಲಿಂಗ್ ಮೂಲಕ ಆದಷ್ಟು ಶೀಘ್ರದಲ್ಲಿ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಾರವಾರ: ರಾಜ್ಯದಲ್ಲಿ ಖಾಲಿ ಇರುವ ತಜ್ಞ ವೈದ್ಯರ ನೇಮಕಾತಿಯ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಅವರಿಗೆ ಶೀಘ್ರದಲ್ಲಿ ಕೌನ್ಸೆಲಿಂಗ್ ಆರಂಭವಾಗಲಿದೆ. ಖಾಲಿ ಇರುವ ಸ್ಥಳಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅವರು ಬುಧವಾರ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಲಿಸ್ಟ್ ವೈದ್ಯರು ಮತ್ತು ತಜ್ಞ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಈ ಕುರಿತಂತೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸಿದ್ದು, ಆಯ್ಕೆಯಾಗಿರುವವರಿಗೆ ಕೌನ್ಸೆಲಿಂಗ್ ಮೂಲಕ ಆದಷ್ಟು ಶೀಘ್ರದಲ್ಲಿ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಈಗಾಗಲೇ ಕೆಲವು ತಾಲೂಕು ಆಸ್ಪತ್ರೆಗಳಲ್ಲಿ ಜಾರಿಯಲ್ಲಿರುವ ಪುನೀತ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು. ಹೃದಯ, ಎದೆನೋವಿನ ಕುರಿತಂತೆ ತಾಲೂಕು ಆಸ್ಪತ್ರೆಗಳಲ್ಲಿ ಇಸಿಜಿ ನಡೆಸಿ, ಚಿಕಿತ್ಸೆ ನೀಡಲಾಗುವುದು ಹಾಗೂ ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವ ಹರೀಶ್ ಸಾಂತ್ವನ ಯೋಜನೆ ಜಾರಿಯಲ್ಲಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು. ಕ್ರಿಮ್ಸ್‌ನಲ್ಲಿನ ಜಿಲ್ಲಾಸ್ಪತ್ರೆಯನ್ನು ಅಲ್ಲಿಂದ ಬೇರ್ಪಡಿಸುವುದಿಲ್ಲ, ಬದಲಾಗಿ ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲಾ ನಾಗರಿಕ ಸಂಘ-ಸಂಸ್ಥೆಗಳ ಒಕ್ಕೂಟ ಪ್ರತಿನಿಧಿಗಳು ಜಿಲ್ಲೆಯಲ್ಲಿನ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಯಂತ್ರೋಪಕರಣಗಳ ಕೊರತೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಹಾಗೂ ಕ್ರಿಮ್ಸ್‌ನ ಡೀನ್ ಡಾ. ಪೂರ್ಣಿಮಾ ಮತ್ತಿತರರು ಇದ್ದರು.