ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಗೊಳಿಸಿ

| Published : Jul 23 2024, 12:34 AM IST

ಸಾರಾಂಶ

ಭದ್ರಾವತಿ ಹಳೇನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯಿಂದ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಒಂದು ಕಾಲದಲ್ಲಿ ಹಲವು ವೈಶಿಷ್ಟ್ಯತೆಗಳಿಂದ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದ್ದ ನಗರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕಳೆದ ಸುಮಾರು ೨೫ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಪರಿಣಾಮ ೨೦೧೮ರಿಂದ ಭವನ ನಿರ್ಮಾಣಗೊಳ್ಳುತ್ತಿದ್ದು, ಆದರೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಅನುದಾನ ಸಹ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ನಿರ್ಲಕ್ಷ್ಯತನ ವಹಿಸಲಾಗಿದೆ ಎಂದು ಆರೋಪಿಸಲಾಯಿತು.

ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿರುವ ಸರ್ಕಾರಕ್ಕೆ ಹಾಗೂ ನಿರ್ಮಾಣಕ್ಕೆ ಸಹಕರಿಸುತ್ತಿರುವ ಸ್ಥಳೀಯ ಸಂಸ್ಥೆಗಳಿಗೆ, ಮುಂಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಸಮಿತಿ ಅಭಿನಂದನೆ ಸಲ್ಲಿಸುವ ಜೊತೆಗೆ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ತಕ್ಷಣ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡುವಂತೆ ಹಾಗೂ ಭವನ ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನೆರವೇರಿಸುವಂತೆ ಆಗ್ರಹಿಸಲಾಯಿತು.

ಧರಣಿ ಸತ್ಯಾಗ್ರಹದಲ್ಲಿ ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ಮಾತನಾಡಿ, ಕಾಮಗಾರಿ ಪೂರ್ಣಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದರು.

ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ಪ್ರಮುಖರಾದ ಗೌರವಾಧ್ಯಕ್ಷರಾದ ಡಿ.ಸಿ ಮಾಯಣ್ಣ, ವಿಜಯಮ್ಮ ಎನ್. ಗಿರಿಯಪ್ಪ, ಪ್ರೊ. ಎಂ. ಚಂದ್ರಶೇಖರಯ್ಯ, ಟಿ.ಜಿ ಬಸವರಾಜಯ್ಯ, ಐ.ಎಲ್ ಅರುಣ್ ಕುಮಾರ್, ಕಾರ್ಯಾಧ್ಯಕ್ಷರಾದ ಮಹಾಲಿಂಗಪ್ಪ, ಸೆಲ್ವರಾಜ್, ಸಿದ್ದಲಿಂಗಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಅನಂತರಾಮು, ಅಕ್ರಂ ಖಾನ್, ಎಂ. ನಾರಾಯಣ, ಸಂಚಾಲಕ ಶ್ರೀನಿವಾಸ್, ಆರ್. ಅಜಿತ್ ಕುಮಾರ್, ದುರ್ಗೆಶ್, ಎಂ.ಎನ್ ಚಂದ್ರಶೇಖರ್ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.