ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಆಧ್ಯಾತ್ಮಿಕ ಶಿಕ್ಷಣವು ಮಕ್ಕಳ ಮನಸ್ಸನ್ನು ಸಕಾರಾತ್ಮಕತೆಯತ್ತ ಕರೆದುಕೊಂಡು ಹೋಗುತ್ತದೆ. ವಿನಯತೆ, ನಮ್ರತೆ ಮತ್ತು ನಾಗರಿಕ ಪ್ರಜ್ಞಾವಂತರನ್ನು ರೂಪಿಸುತ್ತದೆ ಎಂದು ಪ್ರಸೂತಿ ತಜ್ಞೆ ಡಾ. ಚೈತನ್ಯಾ ಹೇಳಿದರು.ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಪ್ರಜಾಪಿತ ಬ್ರಹ್ಮ ಅವರ ಸ್ಮೃತಿ ದಿನದ ಪ್ರಯುಕ್ತ ನಡೆದ ವಿಶ್ವಶಾಂತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧ್ಯಾತ್ಮಿಕ ಧ್ಯಾನ ಪದ್ಧತಿಯು ಮನುಷ್ಯನಿಗೆ ಸೆಳೆತ ಮತ್ತು ಒತ್ತಡಗಳಿಂದ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಇದರಿಂದ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಉತ್ತಮವಾಗುತ್ತದೆ. ಮಕ್ಕಳು ಈ ನಾಡಿನ ಅಮೂಲ್ಯ ಆಸ್ತಿ ಅವರಲ್ಲಿ ದೈವಿಕ ಆಧ್ಯಾತ್ಮಿಕ ಮತ್ತು ಮೌಲ್ಯಾಧಾರಿತ ಜೀವನ ನಡೆಸುವ ಶಿಕ್ಷಣ ಅಗತ್ಯವಿದೆ. ಈಶ್ವರೀಯ ವಿಶ್ವವಿದ್ಯಾಲಯ ಇಂತಹ ಮಕ್ಕಳಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಉಂಟು ಮಾಡುವುದು ತುಂಬಾ ಶ್ಲಾಘನೀಯ ಕಾರ್ಯ ಎಂದರು.
ರಾಜಯೋಗಿ ಡಾ.ಪಿ.ಎಚ್. ಮಹೇಂದ್ರಪ್ಪ ಮಾತನಾಡಿ, ಪ್ರಜಾಪಿತ ಬ್ರಹ್ಮ ಅವರು ಈಶ್ವರಿಯ ವಿಶ್ವವಿದ್ಯಾಲಯದ ಸ್ಥಾಪನೆಗೆ ಮೂಲ ಕಾರಣಕರ್ತರು. ಅವರ ಶರೀರದಲ್ಲಿ ಪರಮ ಪಿತಾ ಶಿವ ಪರಮಾತ್ಮನು ದಿವ್ಯ ಅಲೌಕಿಕ ಅವತರಣೆ ಮಾಡಿ ಸಹಜ ಜ್ಞಾನ ಮತ್ತು ರಾಜಯೋಗ ಶಿಕ್ಷಣವನ್ನು ಈಶ್ವರಿಯ ವಿಶ್ವವಿದ್ಯಾಲಯದ ಮೂಲಕ ನೀಡುತ್ತಿದ್ದಾರೆಂದು. ಅವರು ಒಬ್ಬ ಆಧ್ಯಾತ್ಮಿಕ ಆದರ್ಶ ಪುರುಷರು ತಮ್ಮ ಬದುಕನ್ನು ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿಕೊಂಡ ಮಹಾನ್ ತ್ಯಾಗಿ ತಪಸ್ವಿ ಹಾಗೂ ಸಮರ್ಪಣಾ ಮನೋಭಾವದ ಆಗಿದ್ದರು. ಅವರ ಪುಣ್ಯ ಸ್ಮರಣೆಯನ್ನು ವಿಶ್ವಶಾಂತಿ ದಿನವಾಗಿ ನಾವು ಆಚರಿಸುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ವರ್ಧಮಾನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ರಾಮ ವೇಷ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಈಶ್ವರೀ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಅನ್ನಪೂರ್ಣ, ಬಿಕೆ ಗೀತಾ, ವಿಜಯಣ್ಣ, ನಿವೃತ್ತ ಉಪ ನಿರ್ದೇಶಕ ಅಶೋಕ್ ಕುಮಾರ್, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಮಾಜಿ ಸದಸ್ಯರಾದ ಪುಷ್ಪಾವತಿ, ಮುಖ್ಯೋಪಾಧ್ಯಾಯನಿ ಗಾಯತ್ರಿ ಸೇರಿದಂತೆ ಹಲವರು ಹಾಜರಿದ್ದರು.