ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು, ಸನ್ಮಾರ್ಗದಲ್ಲಿ ಮುನ್ನಡೆಯುವ ಛಲಬೇಕು, ಅಶಾಂತಿಯಿಂದ ತತ್ತರಿಸುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಮತ್ತು ಸಂಸ್ಕೃತಿಗಳ ಪರಿಪಾಲನೆ ಅಗತ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಬ್ಯಾಡಗಿ:ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು, ಸನ್ಮಾರ್ಗದಲ್ಲಿ ಮುನ್ನಡೆಯುವ ಛಲಬೇಕು, ಅಶಾಂತಿಯಿಂದ ತತ್ತರಿಸುತ್ತಿರುವ ಇಂದಿನ ದಿನಗಳಲ್ಲಿ ಧರ್ಮ ಮತ್ತು ಸಂಸ್ಕೃತಿಗಳ ಪರಿಪಾಲನೆ ಅಗತ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜರುಗಿದ 9ನೇ ವರ್ಷದ ಕಾರ್ತಿಕೋತ್ಸವ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು. ಒಳಗಿರುವ ಕತ್ತಲೆ ಕಳೆಯಲು ಗುರುವಿನ ಜ್ಞಾನ ಕಿರಣದ ಅಗತ್ಯವಿದೆ, ಜೀವನಾಧಾರಕ್ಕೆ ಅನ್ನ, ನೀರು, ಗಾಳಿ ಮತ್ತು ಒಳ್ಳೆಯ ಮಾತು ಹೇಗೆ ಮುಖ್ಯವೋ. ಮನುಷ್ಯನ ಬದುಕಿಗೆ ಧರ್ಮವೇ ಜೀವಾಳವಾಗಿದೆ, ಮನಕ್ಕೆ ಶಾಂತಿ ಆತ್ಮಕ್ಕೆ ಆನಂದ ಕೊಡುವುದು ಧರ್ಮ ಸಕಲ. ಧರ್ಮಕ್ಕೂ ದಯಯೇ ಮೂಲವಾಗಿದ್ದು ಆತ್ಮಾವಲೋಕನ ಮಾಡಿಕೊಂಡು ಒಳ್ಳೆಯ ದಾರಿಯತ್ತ ನಡೆಯುವಂತೆ ಸಲಹೆ ನೀಡಿದರು.

ಆಸೆ ಹಾಗೂ ದುರಾಸೆಗಳ ಹಿಂದೆ ಬಿದ್ದಿರುವ ಮನುಷ್ಯ: ಮನೆ, ಊರು, ಉಡುಗೆ ತೊಡುಗೆ ಸಂಬಂಧ ಮತ್ತು ಸ್ನೇಹಿತರನ್ನು ಬದಲಾಯಿಸಿದರೂ ಆಸೆ ಹಾಗೂ ದುರಾಸೆಗಳ ಹಿಂದೆ ಬಿದ್ದಿರುವ ಮನುಷ್ಯ ನಿರೀಕ್ಷೆಗಳ ತೊಳಲಾಟದಲ್ಲಿ ತನ್ನನ್ನುತಾನು ಬದಲಾಯಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ, ಇಂತಹವರಿಂದ ಸಮಾಜ, ದೇಶ, ಬದಲಾಯಿಸಲು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದರು.

ಸಿದ್ಧಾಂತ ಶಿಖಾಮಣಿಯಲ್ಲಿ ಉಲ್ಲೇಖ: ಐಶ್ವರ್ಯ, ಅಧಿಕಾರ, ಆಸೆ, ಪ್ರೇಮ, ದ್ವೇಷ ಇವೆಲ್ಲವುಗಳ ಅವಶ್ಯಕತೆಗಿಂತ ಹೆಚ್ಚಾದರೆ ವಿಷವಾಗಲಿವೆ. ಇವೆಲ್ಲವೂ ಮಿತಿಯಲ್ಲಿದ್ದರೆ ಅದೇ ಅಮೃತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಭರವಸೆ ಮತ್ತು ಕನಸುಗಳು ನಮ್ಮಕೂದಲು ಮತ್ತು ಉಗುರಿನಂತೆ ಕತ್ತರಿಸಿದಷ್ಟು ಬೆಳೆಯುತ್ತಿರಬೇಕು ಎಂದರು.

ಶಿರಡಿ ಸಾಯಿಬಾಬಾ ದೇವಮಾನವ: ಸಕಲ ಜೀವಾತ್ಮರಲ್ಲಿ ಅಡಗಿರುವ ಪರಮಾತ್ಮ ಒಬ್ಬನೇ ಎಂಬ ಉದಾತ್ತ ನಿಲುವನ್ನು ಹೊಂದಿದ ಶಿರಡಿ ಸಾಯಿಬಾಬಾ ಅವರು ದೇವಮಾನವರಾಗಿ ಜಗತ್ತಿನೆಲ್ಲೆಡೆ ಬೆಳಗುತ್ತಿದ್ದಾರೆ, ಅವರ ಹೆಸರಿನಲ್ಲಿ ಪ್ರತಿ ವರ್ಷ ಕಾರ್ತಿಕ ದೀಪೋತ್ಸವ ಹಾಗೂ ಧರ್ಮಸಭೆ ನಡೆದುಕೊಂಡು ಬರುತ್ತಿವೆ, ಸಕಲ ಸದ್ಭಕ್ತರ ಜೊತೆಗೆ ಧರ್ಮದರ್ಶಿ ಹಿರೇಮಠ ಮಂಜಯ್ಯನವರು ಸೇವೆ ಪರಿಶ್ರಮ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ಸಭೆಯಲ್ಲಿ ಗುಡ್ಡದ ಮಲ್ಲಾಪುರದ ಮೂಕಪ್ಪ ಶಿವಾಚಾರ್ಯರು, ಮಳಲಿಮಠದ ನಾಗಭೂಷಣ ಶಿವಾಚಾರ್ಯರು, ಬ್ಯಾಡಗಿ ಮುಪ್ಪನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು, ಕೂಡಲದ ಮಹೇಶ್ವರ ದೇವರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗುಬ್ಬಿ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಅಡ್ನೂರು ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅಕ್ಕಿಆಲೂರು ಚಂದ್ರಶೇಖರ ಶಿವಾಚಾರ್ಯರು, ಕುಮಾರಪಟ್ಟಣದ ಜಗದೀಶ್ವರ ಶ್ರೀಗಳು ಸಾನಿಧ್ಯವಹಿಸಿದ್ದರು.

ಅತಿಥಿಗಳಾಗಿ ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ವಿ.ವಿ. ಹಿರೇಮಠ, ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ದಾಸೋಹಮಠ, ವೇ.ರಾಚಯ್ಯನವರು ಓದಿಸೋಮಠ, ಮುರಿಗೆಪ್ಪ ಶೆಟ್ಟರ, ಕೆ. ರವೀಂದ್ರ, ಸುನಂದಾ ಕುಂಕೋಡ, ಭಾರತಿ ಪೂಜಾರ, ಎಂ.ಎಂ. ಕೆಂಬಿ, ಅಶೋಕ ಮುತ್ತೂರು, ಗಿರೀಶ ಇಂಡಿಮಠ, ಸಾಯಿಮಂದಿರ ಧರ್ಮದರ್ಶಿ ಮಂಜಯ್ಯಶಾಸ್ತ್ರೀ ಹಿರೇಮಠ ಹಾಗೂ ಇನ್ನಿತರರಿದ್ದರು.