ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳು ಟಿವಿ ಮತ್ತು ಮೊಬೈಲ್ ಫೋನ್ ಗಳನ್ನು ಕೇವಲ ಜ್ಞಾನ ಸಂಪಾದನೆಗೋಸ್ಕರ ಉಪಯೋಗವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ತಿಳಿಸಿದರು.ಜೆಎಸ್‌ಎಸ್ ಮಹಾವಿದ್ಯಾಪೀಠದ ಸಿದ್ಧಾರ್ಥನಗರ ಜೆಎಸ್‌ಎಸ್ ಪಬ್ಲಿಕ್ ಶಾಲೆ ವತಿಯಿಂದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತರ ಶಾಲಾ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತು ಸ್ಪರ್ಧಾತ್ಮಕವಾದ್ದರಿಂದ ವಿದ್ಯಾರ್ಥಿಗಳು ಪುಸ್ತಕದ ಹೊರತಾಗಿ ಅನೇಕ ವಿಚಾರಗಳನ್ನು ಬೇರೆ ಬೇರೆ ಮೂಲದಿಂದ ತಿಳಿಯಬೇಉ. ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವುದು ಒಂದು ಕಲಿಕಾ ಪ್ರಕ್ರಿಯೆಯೇ ಹೊರತು ಸೋಲು ಗೆಲುವು ಎಂಬುದು ಮುಖ್ಯವಾಗಬಾರದು.ರಸಪ್ರಶ್ನೆಗಳಲ್ಲಿ ಪಾಲ್ಗೊಳ್ಳಲು ಸಾಮಾನ್ಯ ಜ್ಞಾನ ಬಹಳ ಮುಖ್ಯ. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದರಿಂದ ನಮ್ಮ ಸುತ್ತಮುತ್ತ ಜರಗುವ ಘಟನೆ, ಪ್ರಪಂಚದ ವಿವಿಧೆಡೆ ನಡೆಯುವ ಸಾಮಾಜಿಕ, ವಿಜ್ಞಾನ, ತಾಂತ್ರಿಕ, ಸಾಂಸ್ಕೃತಿಕ, ರಾಜಕೀಯ ವಿಷಯ ಅರಿಯಲು ಸಾಧ್ಯವಾಗುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಲು ನೀವು ತರಗತಿಯಲ್ಲಿ ತೆಗೆದುಕೊಂಡ ಅಂಕ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಸಾಮಾನ್ಯ ಜ್ಞಾನದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಆಂದೋಲನ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಮಾತನಾಡಿ, ಇಂತಹ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಒಂದು ರೀತಿಯಲ್ಲಿ ಕಲಿಕೆಯ ಸಂತೋಷ ಕೂಟದಂತೆ. ಈ ಸ್ಪರ್ಧೆಯು ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಿಮ್ಮ ಸ್ನೇಹಿತರಲ್ಲಿರುವ ಆಂತರಿಕ ಪ್ರತಿಭೆಯನ್ನು ಅನ್ವೇಷಿಸಲು ಉತ್ತಮ ವೇದಿಕೆ. ಆದ್ದರಿಂದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸ್ಪಷ್ಟ ಆಲೋಚನೆಗಳಿಂದ, ಕಲಿಯುವಿಕೆಯ ಉತ್ಸಾಹದಿಂದ ಭಾಗವಹಿಸುವಂತೆ ಕಿವಿಮಾತು ಹೇಳಿದರು.ಸಿದ್ಧಾರ್ಥನಗರ ಜೆಎಸ್‌ಎಸ್ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಬಿ. ಲತಾ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಎಸ್.ಎಲ್. ನಾಗೇಂದ್ರ ವಂದಿಸಿದರು. ವಿದ್ಯಾರ್ಥಿನಿ ಮಾನಸ ಆರಾಧ್ಯ ನಿರೂಪಿಸಿದರು.