ಕ್ರೀಡೆ ಸ್ಪರ್ಧಾತ್ಮಕ ಪ್ರಯತ್ನವಾಗಿದ್ದು, ಪ್ರತಿಯೊಂದು ಸ್ಪರ್ಧೆಯಲ್ಲೂ ಯಶಸ್ಸು ದೊರೆಯಲೇಬೇಕೆಂದಿಲ್ಲ. ಆದರೆ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಒಂದಲ್ಲ ಒಂದು ದಿನ ಯಶಸ್ಸು ಖಚಿತವಾಗಿ ದೊರೆಯುತ್ತದೆ. ವಿದ್ಯಾರ್ಥಿಗಳು ಈ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಜಯದೇವ ಅಗಡಿ ಹೇಳಿದರು.
ಶಿಗ್ಗಾಂವಿ: ಕ್ರೀಡೆ ಸ್ಪರ್ಧಾತ್ಮಕ ಪ್ರಯತ್ನವಾಗಿದ್ದು, ಪ್ರತಿಯೊಂದು ಸ್ಪರ್ಧೆಯಲ್ಲೂ ಯಶಸ್ಸು ದೊರೆಯಲೇಬೇಕೆಂದಿಲ್ಲ. ಆದರೆ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಒಂದಲ್ಲ ಒಂದು ದಿನ ಯಶಸ್ಸು ಖಚಿತವಾಗಿ ದೊರೆಯುತ್ತದೆ. ವಿದ್ಯಾರ್ಥಿಗಳು ಈ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಜಯದೇವ ಅಗಡಿ ಹೇಳಿದರು.
ತಾಲೂಕಿನ ಕುನ್ನೂರು ಗ್ರಾಮದ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಆಯೋಜಿಸಿದ್ದ ತಡಸ-ದುಂಡಸಿ ಕ್ಲಸ್ಟರ್ ಮಟ್ಟದ ೧೪ ವರ್ಷದೊಳಗಿನ ಬಾಲಕ, ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ, ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸಹೋದರತ್ವದ ಮನೋಭಾವದಿಂದ ಸ್ಪರ್ಧಿಸಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಆಟಗಾರರಾಗುವ ಮೂಲಕ ಭವಿಷ್ಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಗುರಿ ಹೊಂದಬೇಕು ಎಂದರು.ಚಿತ್ರನಟ ಹಾಗೂ ಲ್ಯಾಂಡ್ ಲಾರ್ಡ ವರುಣ ಪಾಟೀಲ ಕಾರ್ಯಕ್ರಮದ ಜ್ಯೋತಿಯನ್ನು ಬೆಳಗಿಸಿದರು.
ಜಾನಪದ ಕಲಾವಿದ ಡಾ. ಶರೀಫ ಮಾಕಪ್ಪನವರ ಮಾತನಾಡಿ, ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಧರ್ಮ, ಮತ, ಪಂಥದ ಭೇದವಿಲ್ಲದೆ ಸಮಾನ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನಾ ಆಜಾದ್ ಮಾದರಿ ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಆಸ್ಪಕಲಿ ಮತ್ತೇಖಾನ ಮಾತನಾಡಿ ಕ್ರೀಡೆ ಸಂಘಟಿತ, ಸ್ಪರ್ಧಾತ್ಮಕ ಹಾಗೂ ಕೌಶಲ್ಯಪೂರ್ಣ ದೈಹಿಕ ಚಟುವಟಿಕೆಯಾಗಿದ್ದು, ಶಿಸ್ತು, ಬದ್ಧತೆ ಮತ್ತು ನ್ಯಾಯಯುತ ಆಟದ ಮನೋಭಾವವನ್ನು ಬೆಳೆಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಪಾಲ್ಗೊಳ್ಳುವಿಕೆ ಹಾಗೂ ನಿರಂತರ ಪ್ರಯತ್ನ ಮುಖ್ಯ ಎಂದು ಹೇಳಿದರು.
ಸುಮಂತಗೌಡ ಪಾಟೀಲ ಸೇರಿದಂತೆ ಹಲವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ನಾಗಪ್ಪ ಬಡ್ಡಿ, ಪತ್ರಕರ್ತ ಬಿ.ಎಸ್. ಹಿರೇಮಠ, ಶಿವಾನಂದ ದೊಡ್ಡಮನಿ, ಮುಖಂಡರಾದ ಗಂಗಪ್ಪ ಹುಲ್ಲೂರ, ಬಸನಗೌಡ ಬ್ಯಾಹಟ್ಟಿ, ಮಾಬೂಸಾಬ ಜಿಗಳೂರ, ಅಶೋಕ ಮರಿಸಿದ್ದಣ್ಣವರ, ರಾಮಪ್ಪ ಮತ್ತಿಗಟ್ಟಿ, ಕಲ್ಲಪ್ಪ ಅಗಸಿಮನಿ, ಮೈಲಾರಪ್ಪ ಮಮದಾಪುರ, ಮಹದೇವಪ್ಪ ಬಸರಿಕಟ್ಟಿ, ಈರಣ್ಣ ಮಾಳೋಜನವರ, ಮೌಲಾನಾ ಆಜಾದ್ ಮಾದರಿ ಶಾಲೆಯ ಸಲಹಾ ಸಮಿತಿ ಸದಸ್ಯರಾದ ಮಾಳೇಶ ಮಣಕಟ್ಟಿ, ಸಂತೋಷ ಮೂಳೆ, ರವಿ ಹೊರಟ್ಟಿ, ಶೋಭಾ ವರ್ಣೇಕರ, ಮಂಜುಳಾ ಬಾರಕೇರ, ಭಗೀರಥ ಯುವಕ ಸೇವಾ ಸಂಘದ ಅಧ್ಯಕ್ಷ ಯಲ್ಲಪ್ಪ ಬಾರ್ಕಿ, ಉಪಾಧ್ಯಕ್ಷ ದಾದಾಪೀರ ಜಿಗಳೂರ ಉಪಸ್ಥಿತರಿದ್ದರು.ಸಹ ಶಿಕ್ಷಕಿಯರಾದ ಶೃತಿ ಸೇಟ ಹಾಗೂ ಸುಮಾ ಗಬ್ಬೂರ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಚಾಯಪ್ಪ ಲಮಾಣಿ ಸ್ವಾಗತಿಸಿ, ವಂದಿಸಿದರು.