ಕ್ರೀಡೆಗಳು ಮನುಷ್ಯನಿಗೆ ಸಂಘಟನೆ, ತಾಳ್ಮೆ, ಆರೋಗ್ಯ ಸುಧಾರಣೆ, ಮಾನಸಿಕ ಒತ್ತಡ ನಿವಾರಣೆ ಶಿಸ್ತುಗಳಂತಹ ಗುಣಗಳನ್ನು ಬೆಳೆಸುತ್ತವೆ. ಜೀವನದ ಸಮಗ್ರ ಬೆಳವಣಿಗೆಗೆ ಕ್ರೀಡೆಗಳು ಅವಶ್ಯ ಎಂದು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕ್ರೀಡೆಗಳು ಮನುಷ್ಯನಿಗೆ ಸಂಘಟನೆ, ತಾಳ್ಮೆ, ಆರೋಗ್ಯ ಸುಧಾರಣೆ, ಮಾನಸಿಕ ಒತ್ತಡ ನಿವಾರಣೆ ಶಿಸ್ತುಗಳಂತಹ ಗುಣಗಳನ್ನು ಬೆಳೆಸುತ್ತವೆ. ಜೀವನದ ಸಮಗ್ರ ಬೆಳವಣಿಗೆಗೆ ಕ್ರೀಡೆಗಳು ಅವಶ್ಯ ಎಂದು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಡಾ.ಅಂಬೇಡ್ಕರ್‌ ೭೦ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿ.೬ ರಿಂದ ಡಿ.೨೩ರವರೆಗೆ ಫ್ಲೆ ಸ್ಪೋಟ್ಸ್ ಅಸೋಸಿಯೇಷನ್‌ ಹಮ್ಮಿಕೊಂಡಿರುವ ಸಿಂದಗಿ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯ ೩ನೇ ದಿನವಾದ ಸೋಮವಾರ ವಿಜಯಪುರ ಪೊಲೀಸ್‌ ತಂಡ ಮತ್ತು ಅವಟಿ ಟೈಗರ್ಸ್‌ ತಂಡಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಶಾಲೆಗಳಿಗೆ ರಜೆ ಬಂದರೆ ಮೈದಾನಗಳಲ್ಲಿ ಮಕ್ಕಳೆ ತುಂಬುತ್ತಿದ್ದರು, ಆದರೆ ಆಟವಾಡಲು ಯಾವುದೇ ಕ್ರೀಡಾ ಸಾಮಗ್ರಿಗಳು ಇರುತ್ತಿರಲಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರ ಸಂಘ ಸಂಸ್ಥೆಗಳು ಎಷ್ಟೇ ಮೈದಾನ ಕ್ರೀಡಾ ಸಾಮಗ್ರಿಗಳನ್ನು ನೀಡಿದರು ಮೈದಾನಗಳಲ್ಲಿ ಮಕ್ಕಳೆ ಇರುವುದಿಲ್ಲ ಇದು ಈಗಿನ ದುಸ್ಥಿತಿಯಾಗಿದೆ.

ಇಂದು ಮೊಬೈಲ್ ಮಕ್ಕಳ ಕ್ರೀಡೆಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಪಾಲಕರು ಎಚ್ಚರ ವಹಿಸಬೇಕು. ಮಕ್ಕಳಿಂದ ಮೊಬೈಲ್‌ ದೂರವಿಡಿ, ಇದು ಸಮಾಜಕ್ಕೆ ಮಾರಕವಾಗಲಿದೆ ಎಂದ ಅವರು, ಈ ಕ್ರೀಡಾಕೂಟದ ಆಯೋಜನೆ ಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಿದ್ದಾರೆ. ಇದು ನಿರಂತವಾಗಿ ನಡೆಯಲಿ ಇದು ಅನೇಕ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿದೆ ಎಂದರು.ಕ್ರೀಡಾ ಆಯೋಜಕ ರಾಜಶೇಖರ ಕೂಚಬಾಳ ಮಾತನಾಡಿ, ಈ ಮೊದಲು ನಾವು ಅನೇಕ ತಂಡಗಳಿಗೆ ಭಾಗವಹಿಸಲು ಅವಕಾಶ ನೀಡುತ್ತಿದ್ದೇವು, ಆದರೆ ಈ ಬಾರಿ ವಿಜಯಪುರ ಪೊಲೀಸ್‌ ತಂಡ ಭಾಗವಹಿಸಿದ್ದು ಸಂತಸ ತಂದಿದೆ. ಇದು ಮನರಂಜನೆಗೆ ನಾವು ಮಾಡುತ್ತಿಲ್ಲ ಈ ಕ್ರೀಡಾಕೂಟದಿಂದ ಅನೇಕ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಮಾಡುತಿದ್ದೇವೆ ಎಂದರು.

ಕ್ರೀಡಾಕೂಟದ ಸಂಯೋಜಕರು ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಡಿವೈಎಸ್ಪಿ ಟಿ.ಎಸ್.ಸುಲ್ಪಿ ಅವರಿಗೆ ಗೌರವಿಸಿದರು. ವೇದಿಕೆ ಮೇಲೆ ತಹಸೀಲ್ದಾರ್‌ ಕರೆಪ್ಪ ಬೆಳ್ಳಿ, ಮಾಜಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉದ್ದೆಮಿ ವೇಂಕಟೇಶ ಗುತ್ತೇದಾರ, ಪಿಎಸ್‌ಆಯ್ ಆರೀಫ್ ಮುಷಾಪುರಿ, ರವಿ ಹೊಳಿ, ನಿಂಗರಾಜ ಗುಡಿಮನಿ, ಸಾಹೇಬಪಟೇಲ ಅವಟಿ, ಸಿದ್ದಲಿಂಗ ಚೌಧರಿ, ಪಿರಾ ಮಗರಬಿ ಸೇರಿದಂತೆ ಜಿಲ್ಲಾ ಪೊಲೀಸ್‌ ಕ್ರೀಡಾ ತಂಡ ಇದ್ದರು.

ಎಸ್ಪಿ ಲಕ್ಷ್ಮಣ್ ನಿಂಬರಗಿ ತಂಡಕ್ಕೆ ಗೆಲುವು

ಸಿಂದಗಿಯಲ್ಲಿ ಸೋಮವಾರ ನಡೆದ ವಿಜಯಪುರ ಪೊಲೀಸ್ ತಂಡ ಮತ್ತು ಅವಟಿ ಟೈಗರ್ಸ್ ತಂಡದ ನಡುವಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ತಂಡ ಗೆಲುವನ್ನು ಸಾಧಿಸಿದೆ. 13 ರನ್‌ ಅಂತರಗಳಿಂದ ಗೆಲುವು ಸಾಧಿಸಿದೆ. ಎಸ್ಪಿ ಲಕ್ಷ್ಮಣ್ ನಿಂಬರಗಿ 36 ಬಾಲ್‌ಗಳಲ್ಲಿ 22 ರನ್‌ ಗಳಿಸಿದರೆ, ವೀರೇಶ್ ಚಾಲ ಶೆಟ್ಟಿ 14 ಬಾಲ್‌ಗಳಲ್ಲಿ 35 ರನ್‌ ಗಳಿಸುವ ಮೂಲಕ ಪಂದ್ಯ ಪುರುಷೋತ್ತಮರಾಗಿ ಆಯ್ಕೆಯಾಗಿದರು. ಎಸ್ಪಿ ನಿಂಬರಗಿ ಅವರು, ತಮಗೆ ಬಂದ ಬಹುಮಾನಕ್ಕೆ ಇನ್ನಷ್ಟು ಹಣ ಸೇರಿಸಿ ಇಬ್ಬರೂ ಅಂಪೈರ್‌ಗಳಿಗೆ ನೀಡಿದರು.