ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಲಸದ ಒತ್ತಡ ಪ್ರತಿಯೊಬ್ಬರಿಗೂ ಕೂಡ ಸರ್ವೇ ಸಾಮಾನ್ಯವಾಗಿರುವುದು ಸಹಜ. ಆದರೆ, ಅದರ ಮಧ್ಯೆಯೂ ಕೂಡ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿಯೊಬ್ಬರೂ ಸದೃಢ ಮನಸ್ಸು, ಆರೋಗ್ಯ, ದೇಹದ ಕಡೆ ಹೆಚ್ಚು ಗಮನ ಹರಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರದಿಂದ ಆರಂಭವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-೨೦೨೪ನ್ನು ಉದ್ಘಾಟಿಸಿ ಮಾತನಾಡಿ, ಯುವಜನತೆ ಮೊದಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಆಗ ಮಾತ್ರ ದೇಶವನ್ನು ಉಳಿಸಿ ಬೆಳೆಸಿ ಕಟ್ಟಲು ಸಾಧ್ಯ ಎಂದರು.
ಪೊಲೀಸ್ ಇಲಾಖೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಸಮಯದ ಪರಿವೇ ಇಲ್ಲದೆ ಹಗಲು, ರಾತ್ರಿ, ಬಿಸಿಲು, ಮಳೆ, ಚಳಿ ಎನ್ನದೆ ಸಮಾಜದ ರಕ್ಷಣೆಗಾಗಿ ಕಾಯಕ ಯೋಗಿಗಳಂತೆ ಕರ್ತವ್ಯ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಪೊಲೀಸ್ ಇಲಾಖೆ ಎಂದ ತಕ್ಷಣ ಪ್ರತಿಯೊಬ್ಬರ ಮನಸ್ಸಿನಲ್ಲೂ ಶಿಸ್ತು, ತ್ಯಾಗ ಹಾಗೂ ಸಮಾಜಕ್ಕಾಗಿ ಕಾರ್ಯನಿರತವಾಗಿ ಕೆಲಸ ಮಾಡುತ್ತಿರುವುದು ಮನಸ್ಸಿನಲ್ಲಿ ಮೂಡುತ್ತದೆ. ಆಗ ಅವರ ಮೇಲಿನ ಗೌರವ ಹಾಗೂ ಪ್ರೀತಿ ಇನ್ನಷ್ಟು ದುಪ್ಪಟ್ಟು ಆಗುತ್ತದೆ ಎಂದರು.ಕೆಲಸದ ಒತ್ತಡ ಇರಬಹುದು, ರಜೆಯಿಲ್ಲದ ದಿನಗಳು ಇರಬಹುದು. ಆದರೆ, ಸಿಕ್ಕ ಸಮಯದಲ್ಲೇ ಕಾಯಕವನ್ನು ಮಾಡುತ್ತಲೇ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯಿರಿ ಎಂದು ಕಿವಿಮಾತು ಹೇಳಿದರು.
ನಮ್ಮ ದೇಹಕ್ಕೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ ಆದ್ದರಿಂದ ದಿನದ ೨೪ ಗಂಟೆಗಳಲ್ಲಿ ಕೇವಲ ೧ ಗಂಟೆಯನ್ನಾದರು ಯೋಗಾಭ್ಯಾಸ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಮಾಡುವಂತೆ ತಿಳಿಸಿದರು.ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ವಯಸ್ಸಿಗೆ ತಕ್ಕಂತೆ ದೇಹದ ತೂಕವನ್ನು ವೃದ್ಧಿಸಿಕೊಳ್ಳಿ, ತೂಕ ಹೆಚ್ಚಾದಷ್ಟೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ದೇಹದ ಸಮತೋಲನ ತೂಕವನ್ನು ಕಾಪಾಡಿಕೊಳ್ಳಿ ಎಂದರು.
ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಕೂಡ ನಿಮಗಾಗಿ ನಿಮ್ಮ ಕುಟುಂಬದವರಿಗಾಗಿ ಸಮಯವನ್ನು ಮೀಸಲಿಡಿ. ಪ್ರಸ್ತುತ ಯುಗ ತಂತ್ರಜ್ಞಾನದಿಂದ ಕೂಡಿರುವುದರಿಂದ ನೀವು ನಿಮ್ಮ ಮಕ್ಕಳಿಗೆ ಸಮಯ ನೀಡಲಿಲ್ಲ ಎಂದರೆ ನಿಮ್ಮ ಮಕ್ಕಳ ಮನಸ್ಸು ತಂತ್ರಜ್ಞಾನದ ಕಡೆಯೇ ಹೆಚ್ಚು ಅವಲಂಬಿತವಾಗುತ್ತದೆ. ಆದ್ದರಿಂದ ಬಿಡುವಿನ ಸಮಯ ಮಾಡಿಕೊಂಡು ಸಂಸಾರದ ಜೊತೆಗೆ ಒಡನಾಟ ಇಟ್ಟುಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಈ. ತಿಮ್ಮಯ್ಯ, ಗಂಗಾಧರ ಸ್ವಾಮಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.