ಕ್ರೀಡೆಯನ್ನೇ ಹವ್ಯಾಸವಾಗಿಸಿಕೊಂಡು ಇಂದು ಅನೇಕರು ಉನ್ನತ ಸ್ಥಾನಕ್ಕೇರಿದ್ದಾರೆ.
ಕನ್ನಡಪ್ರಭ ವಾರ್ತೆ ಗದಗ
ದೇಹವನ್ನು ಸದೃಢ ಹಾಗೂ ಆರೋಗ್ಯಯುತವಾಗಿಟ್ಟುಕೊಳ್ಳಲು ನಿತ್ಯವೂ ದೈಹಿಕ ಶ್ರಮ ಅಗತ್ಯ. ಶಾಲಾ ಹಂತದಲ್ಲೇ ಮಕ್ಕಳು ನಿತ್ಯ ಒಂದು ತಾಸಾದರೂ ಆಟೋಟಗಳಲ್ಲಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ತಾಪಂ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಹೇಳಿದರು.ನಗರದ ಪಂ. ಪಂಚಾಕ್ಷರ ಗವಾಯಿಗಳ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಜರುಗಿದ ಗದಗ ನಗರ ವಲಯದ 4ನೇ ಗ್ರೂಪ್ ಮಟ್ಟದ ಪ್ರಾಥಮಿಕ ಶಾಲೆಗಳ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಲ್ಲದ ಬದುಕು ಕೀಟ ತಿಂದ ಹಣ್ಣಿನಂತೆ. ಪೌಷ್ಟಿಕ ಆಹಾರ ಸೇವನೆಯಿಂದ ಶಕ್ತಿ ವೃದ್ಧಿಸಿದರೆ, ಕ್ರೀಡೆಗಳು ವ್ಯಕ್ತಿತ್ವಕ್ಕೆ ಹೊಸ ಚೈತನ್ಯ ತುಂಬುತ್ತವೆ. ಕ್ರೀಡೆಯನ್ನೇ ಹವ್ಯಾಸವಾಗಿಸಿಕೊಂಡು ಇಂದು ಅನೇಕರು ಉನ್ನತ ಸ್ಥಾನಕ್ಕೇರಿದ್ದಾರೆ. ಮಕ್ಕಳು ಚಿಕ್ಕಂದಿನಿಂದಲೇ ಆಟೋಟಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ಆಡಳಿತ ಮಂಡಳಿ ಸದಸ್ಯ ಶರಣಪ್ಪ ಬೆಟಗೇರಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮ ಹಾಗೂ ಪಂ. ಪುಟ್ಟರಾಜ ಗವಾಯಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಂಗೀತ, ಸಾಹಿತ್ಯದೊಂದಿಗೆ ಸರ್ವ ಜಾತಿಯ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಪವಿತ್ರ ಸಂಸ್ಥೆಯ ಕ್ರೀಡಾಕೂಟದಲ್ಲಿ ಶ್ರದ್ಧೆಯಿಂದ ಭಾಗವಹಿಸಿದರೆ ಜಯ ನಿಶ್ಚಿತ ಎಂದರು.
ಪ್ರಮುಖರಾದ ಮೇಘರಾಜ ಭಾವಿ, ಅಧ್ಯಕ್ಷತೆ ವಹಿಸಿದ್ದ ಡಾ. ಪಿ.ಜಿ.ಎ.ಎಸ್. ಸಮಿತಿ ಜಂಟಿ ಕಾರ್ಯದರ್ಶಿ ಎಸ್.ಎಂ. ಗೌಡರ ಮಾತನಾಡಿದರು.ಸಮಿತಿ ನಿರ್ದೇಶಕ ಎಸ್.ಆರ್. ಇಟಗಿ, ಬಿಇಒ ಕಚೇರಿಯ ದೈಹಿಕ ಶಿಕ್ಷಣಾಧಿಕಾರಿ ಎಲ್.ಬಿ. ಹುಡೇದ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ವೀರಣ್ಣನವರು ಹಳ್ಳಿ, ಗಿರಿಯಪ್ಪಗೌಡ ಮುಲ್ಕಿಪಾಟೀಲ, ಡಾ.ಪಿ.ಜಿ.ಎ.ಎಸ್. ಸಮಿತಿ ಕಾರ್ಯದರ್ಶಿ, ಜಿ.ಎಸ್. ಪಾಟೀಲರ ಆಪ್ತ ಕಾರ್ಯದರ್ಶಿ ಬಿ.ಎಸ್. ಚಕ್ರಣ್ಣವರ ಹಾಗೂ ರಾಜೀವ್ ಗಾಂಧಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ಕುಚಬಾಳ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ಜರುಗಿತು. 7ನೇ ತರಗತಿ ಮಕ್ಕಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೆ.ಬಿ. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಯು.ಎಂ. ವಾಲ್ಮೀಕಿ ನಿರೂಪಿಸಿದರು. ಸಿದ್ದಲಿಂಗೇಶ ಕರ್ಜಿಗನೂರು, ಎ.ಎಸ್. ಮುನೇನಕೊಪ್ಪ, ಆರ್.ಎನ್. ಪಾಟೀಲ ಹಾಗೂ ಎ.ಬಿ. ಸೊನ್ನದ ನಿರ್ವಹಿಸಿದರು. ಆರ್.ಎನ್. ಪಾಟೀಲ ವಂದಿಸಿದರು.