ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

| Published : Aug 29 2024, 01:01 AM IST

ಸಾರಾಂಶ

ಯುವ ಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗುಂಗಿನಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯುವಕರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗುಂಗಿಗೆ ಬಿದ್ದು ಹಲವು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕೆ.ವಿ ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಕಳವಳ ವ್ಯಕ್ತಪಡಿಸಿದರು.

ನಗರ ಹೊರವಲಯದ ಕೆ.ವಿ ಕ್ಯಾಂಪಸ್ ನ ಕ್ರೀಡಾಂಗಣದಲ್ಲಿ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್, ಕೆ.ವಿ ಮತ್ತು ಪಂಚಗಿರಿ ದತ್ತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬಾಯ್ಸ್ ಕ್ರಿಕೆಟ್ ಕ್ಲಬ್‌ನಿಂದ ನಗರದ 12 ಮತ್ತು 13 ನೇ ವಾರ್ಡ್ ಗಳ ಯುವಕರಿಗೆ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.

ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ

ಯುವ ಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗುಂಗಿನಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಕೆಲಸದ ಒತ್ತಡಗಳಿಂದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿದ್ದು, ಇದರಿಂದ ಚಿಕ್ಕ ವಯಸ್ಸಿನಲ್ಲೇ ಹಲವು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ ಎಂದರು.

ಕ್ರೀಡಾಕೂಟದ ಆಯೋಜಕ ಸಿಂಧೂರ್ ತೇಜ್ ಮಾತನಾಡಿ, ಕ್ರೀಡಾಕೂಟಕ್ಕೆ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಸಂದೀಪ್‌.ಬಿ.ರೆಡ್ಡಿ, ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಸಹಕರಿಸುವ ಮೂಲಕ ಯುವಕರಲ್ಲಿ ಕ್ರೀಡಾ ಸ್ಫೂರ್ತಿಯನ್ನು ತುಂಬುತ್ತಿರುವುದು ಅಭಿನಂದನೀಯ ಎಂದರು.

ಯೋಧ ಮಂಜುನಾಥ್‌ಗೆ ಸನ್ಮಾನ

ಕಾರ್ಯಕ್ರಮದಲ್ಲಿ ಬಿಎಸ್‌ಎಫ್ ಸೈನಿಕ ಮಂಜುನಾಥ್ ರನ್ನು ಸನ್ಮಾನಿಸಲಾಯಿತು. ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ನ ಹರ್ಷ, ಬಿಜೆಪಿ ನಗರ ಮಂಡಲಾಧ್ಯಕ್ಷ ಅನು ಆನಂದ್, ಮುಖಂಡರಾದ ಶ್ರೀನಿವಾಸ್, ಕಿರಣ್, ಬಾಲು, ಕಾರ್ತಿಕ್, ಎಂಎಸ್‌ಬಿ ಶ್ರೀನಿವಾಸ್, ಬಲರಾಮ್, ಸಾಗರ್ ಮತ್ತಿತರರು ಇದ್ದರು.