ಒತ್ತಡಮುಕ್ತರಾಗಲು ಕ್ರೀಡೆ ಸಹಕಾರಿ

| Published : Nov 25 2023, 01:15 AM IST

ಸಾರಾಂಶ

ಪೊಲೀಸರು ಒತ್ತಡದಿಂದ ಹೊರಬರಲು ಕ್ರೀಡಾಕೂಟಗಳು ಬಹುಮುಖ್ಯ. ವಿಜಯನಗರ ಜಿಲ್ಲೆಯ ಎಲ್ಲ ಪೊಲೀಸರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪೊಲೀಸರು ಶ್ರಮವಹಿಸಿ ಕೆಲಸ ಮಾಡುತ್ತಾರೆ. ಈ ರೀತಿ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಪೊಲೀಸರು ಒತ್ತಡದಿಂದ ಮುಕ್ತರಾಗಲು ಅನುಕೂಲವಾಗುತ್ತದೆ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರೆಹಮಾನ್ ಎ. ನಂದಗಡಿ ತಿಳಿಸಿದರು.

ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸರು ಒತ್ತಡದಿಂದ ಹೊರಬರಲು ಕ್ರೀಡಾಕೂಟಗಳು ಬಹುಮುಖ್ಯ. ವಿಜಯನಗರ ಜಿಲ್ಲೆಯ ಎಲ್ಲ ಪೊಲೀಸರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದರು.

ಎಸ್ಪಿ ಬಿ.ಎಲ್. ಶ್ರೀಹರಿಬಾಬು ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯವಾಗಿದ್ದು, ಕ್ರೀಡಾಸ್ಫೂರ್ತಿಯೊಂದಿಗೆ ಎಲ್ಲರೂ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು. ಪ್ರತಿಯೊಬ್ಬರೂ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.

ಡಿವೈಎಸ್ಪಿಗಳಾದ ತಳವಾರ್‌ ಮಂಜುನಾಥ, ಮಲ್ಲೇಶ್ ಮಲ್ಲಾಪುರ, ವೆಂಕಟಪ್ಪ ನಾಯಕ ಮತ್ತಿತರರಿದ್ದರು.

ಪೊಲೀಸರಿಗೆ ಗೆಲುವು:

ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಪೊಲೀಸ್ ಮತ್ತು ಪತ್ರಕರ್ತರ ನಡುವಿನ ಪಂದ್ಯದಲ್ಲಿ ಎಸ್ಪಿ ಶ್ರೀಹರಿಬಾಬು ನೇತೃತ್ವದ ತಂಡ ೧೮ ರನ್‌ಗಳಿಂದ ಗೆಲುವು ಸಾಧಿಸಿತು.

ನಿಗದಿತ ಹತ್ತು ಒವರ್‌ಗಳಲ್ಲಿ ೬ ವಿಕೆಟ್‌ಗಳನ್ನು ಕಳೆದುಕೊಂಡು ಪೊಲೀಸ್ ತಂಡ ೮೯ ರನ್‌ಗಳನ್ನು ಗಳಿಸಿತು. ಬ್ಯಾಟರ್ ಶಶಿಕುಮಾರ ೪೦ ರನ್‌ಗಳನ್ನು ಬಾರಿಸಿದರು. ಬಳಿಕ ಬ್ಯಾಟಿಂಗ್ ನಡೆಸಿದ ಕಿಚಿಡಿ ಕೊಟ್ರೇಶ್ ನೇತೃತ್ವದ ಪತ್ರಕರ್ತರ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ೭೨ ರನ್‌ಗಳನ್ನು ಗಳಿಸಿ ಸೋಲನುಭವಿಸಿತು.