ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಇಡೀ ವಿಶ್ವದ ಭೂಪಟದಲ್ಲಿ ಬೇರೆ ಎಲ್ಲೂ ನೋಡಲು ಸಿಗದಿರುವ ಅತೀ ಶ್ರೇಷ್ಠವಾದ ಕಲೆ ಈ ಗಮಕ ಸಾಹಿತ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕ ಇಮ್ರಾನ್ ಅಹಮ್ಮದ್ ಬೇಗ್ ತಿಳಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಮಹಿಳಾ ಘಟಕ ಮತ್ತು ಇನ್ನರ್ ವೀಲ್ಹ್ ಕ್ಲಬ್ ನಿಂದ ಪಟ್ಟಣದ ಆರುಣೋದಯ ಶಾಲೆಯಲ್ಲಿ ಆಯೋಜಿಸಿದ್ದ ನುಡಿ ನಿತ್ಯೋತ್ಸವದ ಕೌರವೇಂದ್ರನ ಕೊಂದೆ ನೀನು ಪಠ್ಯಾಧಾರಿತ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಗಮಕ ಸಾಹಿತ್ಯ ಕರ್ನಾಟಕದಲ್ಲಿ ಮಾತ್ರ ಕಾಣಸಿಗುತ್ತದೆ. ಪೌರಾಣಿಕ, ಆಧುನಿಕ ಅಥವಾ ವಚನ ಸಾಹಿತ್ಯವಾಗಿರಬಹುದು, ಹೀಗೆ ಯಾವುದೇ ಪ್ರಕಾರದ ಸಾಹಿತ್ಯದ ಪದ್ಯ ಅಥವಾ ಕವನಗಳನ್ನು ಸುಶ್ರಾವ್ಯವಾಗಿ ಗಾಯನ ರೂಪದಲ್ಲಿ ಹಾಡುವುದನ್ನು ಮತ್ತು ಆ ಪದ್ಯದ ಭಾವನೆಯನ್ನು ಅರ್ಥವಾಗುವ ರೀತಿಯಲ್ಲಿ ವಿವರಿಸಿ ಹೇಳುವುದನ್ನು ಗಮಕ ಸಾಹಿತ್ಯ ಎಂದು ಕರೆಯುತ್ತಾರೆ ಎಂದು ಹೇಳಿದರು. ಗಮಕವನ್ನು ಹಾಡುವ ಸಂದರ್ಭದಲ್ಲಿ ಸಾಹಿತ್ಯದ ಮೂಲ ಆಗಿರುವ ಛಂಧಸ್ಸು ಮತ್ತು ನವರಸಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರಬಾರದು, ಹಾಡುವ ಹಾಡುಗಳಿಗೆ ಅದರ ಭಾವ, ರಾಗ, ಶೃತಿ, ಲಯ ರಾಗಬದ್ಧವಾಗಿ ವಾಸ್ತವಿಕತೆ ಯನ್ನು ಹಾಗೆ ಕಾಪಾಡಿಕೊಂಡು ಪ್ರಸ್ತುತಪಡಿಸುವ ಕಲೆಯನ್ನು ಗಮಕ ಸಾಹಿತ್ಯ ಎಂದು ಕರೆಯುತ್ತೇವೆ, ಅನಾದಿ ಕಾಲದಿಂದ ಸೃಷ್ಠಿಯಾಗಿರುವ ಮಹಾ ಕಾವ್ಯ ರಾಮಾಯಣ. ಸಾಹಿತ್ಯ ರೂಪದಲ್ಲಿ ಇರುವ ಇಡೀ ರಾಮಾಯಣವನ್ನು ಲವ ಕುಶರು ಹಾಡಿದಾಗ ಆ ಲವ ಕುಶರೇ ವಿಶ್ವದ ಆದಿ ಗಮಕಿಗಳಾಗುತ್ತಾರೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ವಿಶಾಲಾಕ್ಷಮ್ಮ ಮಾತನಾಡಿ ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಪಠ್ಯಾಧಾರಿತ ಗಮಕ ವಾಚನ ಮತ್ತು ವ್ಯಾಖ್ಯಾನ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವುದು ನಿಜಕ್ಕೂ ಉತ್ತಮ ಕಾರ್ಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವೀನ್ ಪೆನ್ನಯ್ಯ ಮಾತನಾಡಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಹಿಳಾ ಘಟಕ ಶಾಲಾ ಮಕ್ಕಳಿಗೆ ಪೂರಕವಾದ ಹಲವಾರು ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಿದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಕಿರಣ್ ಗಮಕ ವಾಚನ ಮಾಡಿದರು. ಸಖರಾಯಪಟ್ಟಣದ ನಿವೃತ್ತ ಪ್ರಾಚಾರ್ಯ ಚಂದ್ರಮೌಳಿ ವ್ಯಾಖ್ಯಾನಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೆ ಜಯಸ್ವಾಮಿ, ಪತ್ರಕರ್ತ ಎಸ್. ಎನ್. ಸಿದ್ರಾಮಪ್ಪ, ಶಾಲಾ ಶಿಕ್ಷಕರಾದ ಎನ್.ಜಿ. ಜ್ಯೋತಿ, ನಿರ್ಮಲ, ಕಾವ್ಯ ಟಿ.ಪಿ, ಕೆ.ಪಿ ಜ್ಯೋತಿ, ಮಮತ, ರೇಣುಕಾ, ಚಂದ್ರಕಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,
ವಿದ್ಯಾರ್ಥಿಗಳಾದ ರಕ್ಷ ಕೆ. ಅರಸ ಮತ್ತು ನಿರೀಕ್ಷ ಪ್ರಾರ್ಥಿಸಿದರು, ಶಿಕ್ಷಕಿ ಎಚ್. ಶಿಲ್ಪ ಸ್ವಾಗತಿಸಿ ನಿರೂಪಿಸಿದರು.-
24ಕೆಟಿಆರ್.ಕೆ.3ಃತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಮಹಿಳಾ ಘಟಕ ಮತ್ತು ಇನ್ನರ್ ವೀಲ್ಹ್ ಕ್ಲಬ್ ನಿಂದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕ ಇಮ್ರಾನ್ ಅಹಮ್ಮದ್ ಬೇಗ್, ತಾ.ಕನ್ನಡ ಸಾಹಿತ್ಯ. ಪರಿಷತ್ ಅಧ್ಯಕ್ಷ ನವೀನ್ ಪೆನ್ನಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ವಿಶಾಲಾಕ್ಷಮ್ಮ ಮತ್ತಿತರರು ಇದ್ದರು.