ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸಮಾಜದಲ್ಲಿನ ಆಗು ಹೋಗುಗಳನ್ನ ಅರಿತುಕೊಳ್ಳಲು ನಮಗೆ ಶಿಕ್ಷಣ ಎಷ್ಟು ಮುಖ್ಯವೊ ಅದರಂತೆ ರೋಗಮುಕ್ತ ಜೀವನ ಸಾಗಿಸಲು ಕ್ರೀಡೆ ಅಷ್ಟೆ ಮುಖ್ಯವಾಗಿದೆ ಎಂದು ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮಿ ಹೇಳಿದರು.ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಟಲ್ ಫೌಂಡೇಶನ್ ಅಧ್ಯಕ್ಷರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಗುರುನಾಥ ಕೊಳ್ಳುರ ಅವರ ನೇತೃತ್ವದಲ್ಲಿ ಬೀದರ್ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿದ ಮೋದಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗಲಿದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಆಟದಲ್ಲಿ ಸೋಲು ಗೆಲುವು ಎನ್ನದೆ ಆಟದಲ್ಲಿ ಭಾಗಿಯಾಗುವುದು ಮುಖ್ಯವಾಗಿದೆ. ಇಂದಿನ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗದೆ, ಮೊಬೈಲ್‌ನಲ್ಲಿ ದಿನ ಕಳೆಯದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗುರುನಾಥ ಕೊಳ್ಳುರ ಅವರ ಈ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರ ಮಾತನಾಡಿ, ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು ಎಲ್ಲಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರುವ ದಿನಗಳಲ್ಲಿ ಇತರೆ ಕ್ರೀಡೆಗಳನ್ನು ಕೂಡ ಆಯೋಜಿಸಲಾಗುತ್ತದೆ ಎಂದರು.
ಅಟಲ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಮಾತನಾಡಿ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಆಯೋಜಿಸಿದ್ದು ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು ಎಂದರು.ಈ ಸಂದರ್ಭದಲ್ಲಿ ಸೋಮಶೇಖರ್ ಪಾಟೀಲ ಗಾದಗಿ, ಶರಣಪ್ಪಾ ಸಿಕನಪುರೆ, ಗುರುನಾಥ ಜಾಂತಿಕರ್, ಹಾವಶೆಟ್ಟಿ ಪಾಟೀಲ, ಪ್ರಭು ವಸ್ಮತೆ, ಬಾಬುರಾವ ಕಾರಬಾರಿ, ಸಚಿನ್ ಕೊಳ್ಳುರ, ಡಾ.ನಾಗರಾಜ, ಶಶಿಧರ ಹೊಸಳ್ಳಿ, ಗುರುನಾಥ ರಾಜಗೀರಾ, ವಿರೇಶ ಸ್ವಾಮಿ, ಬಸವ ಮೂಲಗೆ, ಮಹೇಶ ಚಿಂತಾಮಣಿ, ಕ್ರಿಕೆಟ್ ಅಸೋಸಿಯೇಷನ್ ಬೀದರ್ ಪ್ರಮುಖರಾದ ಕುಶಾಲ ಪಾಟೀಲ ಗಾದಗಿ, ಅನೀಲ ದೇಶಮುಖ, ಸಂಜಯ ಜಾಧವ್ ಸೇರಿದಂತೆ ಇತರರಿದ್ದರು.