ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈಜು ಒಂದು ದಿನಕ್ಕೆ ಸೀಮಿತವಾಗಬಾರದು ಅದು ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕ ಎಸ್.ಆರ್.ಮಂಜುನಾಥ ಹೇಳಿದರುಇಲ್ಲಿನ ಗೋಪಾಳದಲ್ಲಿರುವ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೈಹಿಕವಾಗಿ ಮತ್ತು ಮಾನಸಿಕವಾಗಿ, ಆರೋಗ್ಯವಂತರಾಗಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದರು.
ಮಕ್ಕಳಿಗೆ ಕೇವಲ ಅಂಕ ಗಳಿಸುವುದು ಮುಖ್ಯವಲ್ಲ, ಓದಿನ ಜೊತೆಗೆ ಮಾನಸಿಕ, ಆರೋಗ್ಯ ಸದೃಢತೆಯನ್ನು ಕಾಪಾಡಿ ಕೊಳ್ಳುವಂತಹ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಜವಾಬ್ದಾರಿಯಾಗಿದೆ ಎಂದರು.ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿಯಾಗುತ್ತದೆ. ಸರ್ಕಾರ ಕ್ರೀಡಾಪಟುಗಳಿಗೆ ಸಾಕಷ್ಟು ಯೋಜನೆಗಳು ತಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ವಿದ್ಯೆಗಷ್ಟೇ ಸೀಮಿತವಾಗದೆ,ಕ್ರೀಡೆ ಮುಖಾಂತರ ಯುವ ಶಕ್ತಿಯನ್ನು ಬೆಳೆಸು ವಂತಹ ಒಂದು ಪವಿತ್ರವಾದ ಅಂಗ ಅಂದರೆ ಅದು ಕ್ರೀಡೆ,ಸರ್ಕಾರ ಹೆಚ್ಚು ಹೊತ್ತು ನೀಡಿ, ಶಿವಮೊಗ್ಗದಲ್ಲಿ ಅತ್ಯುತ್ತಮ ಮಟ್ಟದ ಈಜುಕೊಳ ಇದಾಗಿದ್ದು, ಸಾರ್ವಜನಿಕರು, ಪೋಷಕರು ಮತ್ತು ಇಲಾಖೆ ಜೊತೆ ಸಹಕರಿಸಿ ಮಕ್ಕಳು ಸದುಪಯೋಗ ಪಡೆಯುವಂತಹ ಅವಕಾಶ ಕ್ರೀಡಾಪಟುಗಳಿಗೆ ದೊರಕುತ್ತಿದೆ ಎಂದು ಹೇಳಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖಾನಾಯ್ಕ ಮಾತನಾಡಿ, ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಯನ್ನು ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಮಾತನಾಡಿ, ಕ್ರೀಡೆಯಲ್ಲಿ ಸೋಲುವುದು ಸಾಮಾನ್ಯ ಆದರೆ ಕ್ರೀಡಾಪಟು ಎಂದೂ ಕೂಡ ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.ಆಟದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂದ ಅವರು, ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ ಅಲ್ಲದೇ ಕ್ರೀಡೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.
ಕ್ರೀಡಾಪಟುಗಳಲ್ಲಿ ಅತ್ಯಂತ ಸಾಮರಸ್ಯವಿರುತ್ತದೆ. ಇದು ಕ್ರೀಡಾ ಕ್ಷೇತ್ರದ ಗುಟ್ಟಾಗಿದೆ. ಕ್ರೀಡೆ ತಮ್ಮ ಮಾನಸಿಕ ಬುದ್ಧಿಮಟ್ಟ ವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.