ಸಾರಾಂಶ
"ಕನ್ನಡಪ್ರಭ " ವರದಿ ಉಲ್ಲೇಖಿಸಿ ಗುರುಮಠಕಲ್ ಶಾಸಕ ಕಂದಕೂರು ದೂರು
ಮಕ್ಕಳಿಗೆ ಅಪೌಷ್ಟಿಕ ಆಹಾರ, ಅವ್ಯವಸ್ಥೆ ಬಗ್ಗೆ ಕನ್ನಡಪ್ರಭ ವರದಿ ಕನ್ನಡಪ್ರಭ ವಾರ್ತೆ ಯಾದಗಿರಿಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯದ ಅವ್ಯವಸ್ಥೆ ಹಾಗೂ ಮಕ್ಕಳಿಗಾಗುತ್ತಿರುವ ಶೋಷಣೆ ಬಗ್ಗೆ ಕನ್ನಡಪ್ರಭ ವರದಿ ಉಲ್ಲೇಖಿಸಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ನೀಡಿದ ದೂರಿನ ಮೇರೆಗೆ, ತನಿಖೆಗೆ ಆದೇಶಿಸಿರುವ ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಜಿ. ನಾಗೇಂದ್ರ ಅವರು, ಐದು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಯವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿನ ಅವ್ಯವಸ್ಥೆ, ಪೌಷ್ಟಿಕ ಆಹಾರದಲ್ಲಿ ಅವ್ಯವಹಾರ ಹಾಗೂ ಕ್ರೀಡಾಂಗಣ ನಿರ್ವಹಣೆಯಲ್ಲಿ ಕೋಟ್ಯಂತರ ರುಪಾಯಿಗಳ ಅವ್ಯವಹಾರ ಆರೋಪಗಳ ಕುರಿತು "ಕನ್ನಡಪ್ರಭ " ನ.27 ರಂದು ವರದಿ ಪ್ರಕಟಿಸಿತ್ತು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಕ್ರೀಡಾ ಸಚಿವ ಜಿ. ನಾಗೇಂದ್ರ ಅವರಿಗೆ ಫೋನಾಯಿಸಿ ಅವ್ಯವಸ್ಥೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯ ಹಾಗೂ ಕ್ರೀಡಾ ವಸತಿ ನಿಲಯದ ಮಕ್ಕಳಿಗೆ ಆಗುತ್ತಿರುವ ಶೋಷಣೆ ಬಗ್ಗೆ ಸಚಿವರಿಗೆ ಶಾಸಕ ಕಂದಕೂರ ವಿವರಿಸಿದರು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಜಿ. ನಾಗೇಂದ್ರ, ಕೂಡಲೇ ತನಿಖೆಗೆ ಆದೇಶಿಸಿ, ಆಯಕ್ತರಿಗೆ ಕನ್ನಡಪ್ರಭ ವರದಿ ಲಗತ್ತಿಸಿ ಪತ್ರ ಬರೆದು ಸೂಚಿಸಿದ್ದಾರೆ. ಶಾಸಕ ಕಂದಕೂರ ಅವರು ದೂರವಾಣಿ ಮುಖಾಂತರ ಈ ಅವ್ಯವಹಾರ ಆರೋಪಗಳ ಕುರಿತು ತನಿಖೆಗೆ ಆಗ್ರಹಿಸಿ ಮನವಿ ಮಾಡಿರುವ ಕುರಿತು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಲಂಕುಷ ತನಿಖೆ ನಡೆಸಿ, ಐದು ದಿನಗಳೊಳಗೆ ಸಮಗ್ರ ವರದಿಯನ್ನು ಮಾನ್ಯ ಸಚಿವರಿಗೆ ಸಲ್ಲಿಸುವುದು ಹಾಗೂ ಅಧಿಕಾರಿಯ ಕರ್ತವ್ಯಚ್ಯುತಿ ಎಸಗಿದ್ದರೆ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶಿಸಿದ್ದಾರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಗಿರೀಶ ಎಲ್. ಪಿ. ಪತ್ರದಲ್ಲಿ ತಿಳಿಸಿದ್ದಾರೆ. ಹೊಸ ಗಾದೆ, ಕಂಪ್ಯೂಟರ್‌ಗಳ ಅಳವಡಿಕೆ ಯತ್ನ!ಕ್ರೀಡಾ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕುರಿತು ಕನ್ನಡಪ್ರಭ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸೋಮವಾರ ಬೆಳಿಗ್ಗೆಯಿಂದಲೇ ಅಲ್ಲಿ ಸ್ವಚ್ಛತಾ ಆಂದೋಲನಕ್ಕೆ ಕೈಜೋಡಿಸಿದಂತಿತ್ತು.ವಸತಿ ನಿಲಯದಲ್ಲಿ ಹರಿದು ಹೋಗಿದ್ದ ಗಾದೆಗಳನ್ನು ಬದಲಾಯಿಸಿ ಹೊಸ ಗಾದೆಗಳನ್ನು ತಂದಿಡಲಾಗಿದ್ದರೆ, ವರ್ಷಗಳಿಂದ ನಾಪತ್ತೆಯಾಗಿದ್ದ ಕಂಪ್ಯೂಟರ್‌ಗಳನ್ನು ತಂದು ಜೋಡಿಸಿಡುವ ಯತ್ನ ನಡೆದಿತ್ತು. ಕುರಿಹಿಂಡಿನಂತೆ ಹಾಕಿದ್ದ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಲು ಸಿದ್ಧತೆಗಳು ನಡೆದಿದ್ದು ಕಂಡು ಬಂದಿದೆ.
ಮಕ್ಕಳ ಊಟಕ್ಕೆಂದು ಹಾಲು, ಹಣ್ಣು, ಮೊಟ್ಟೆ, ಡ್ರೈಫ್ರುಟ್ಸ್ ತರುತ್ತಿರುವುದು ಕಂಡುಬಂತು. ಶೌಚಾಲಯ, ಕೋಣೆಗಳನ್ನು ಸ್ವಚ್ಛತೆ ಮಾಡುವುದು ನಡೆದಿತ್ತು. ದಿಢೀರನೇ ಈ ಎಲ್ಲ ವ್ಯವಸ್ಥೆಗಳನ್ನು ಅಳವಡಿಸುವ ಕಂಡು ಮಕ್ಕಳು ದಂಗಾಗಿದ್ದರು. ನಾಲ್ಕೈದು ತಿಂಗಳಿಂದ ಬೀಗ ಹಾಕಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿ ಮತ್ತೇ ಚಟುವಟಿಕೆಗಳು ಗರಿಗೆದರಿದವು.ಮಕ್ಕಳ ಪೌಷ್ಟಿಕ ಆಹಾರ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ವರ್ಷಗಳಿಂದ ಆಹಾರ ಪೂರೈಸದೇ ಇದ್ದರೂ, ತಿಂಗಳಿಗೆ ಲಕ್ಷಾಂತರ ರು. ಹಣ ಆತನ ಖಾತೆಗೆ ಪಾವತಿಯಾದ ಆರೋಪಗಳು ಇಲ್ಲಿವೆ. ಜಿಲ್ಲಾ ಕ್ರೀಡಾಂಗಣದಲ್ಲಿ ಉತ್ತಮ ಗುಣಮಟ್ಟದ ಟ್ಯ್ರಾಕ್ ನಿರ್ಮಾಣ ಬದಲು, ಸಾದಾ ಮರಮ್ ಹಾಕಿ ಕೋಟ್ಯಂತರ ರು. ಅನುದಾನ ದುರ್ಬಳಕೆ ಮಾಡಿಕೊಂಡ ಬಗ್ಗೆ ಅನೇಕರು ದೂರಿದ್ದರು. ಈ ಎಲ್ಲಗಳ ತನಿಖೆ ನಡೆದರೆ ಜಿಲ್ಲಾ ಕ್ರೀಡಾಂಗಣ ಹಾಗೂ ವಸತಿ ನಿಲಯದಲ್ಲಿ ಅವ್ಯವಹಾರ ಹಾಗೂ ಮಕ್ಕಳ ಮೇಲಿನ ಶೋಷಣೆ ಬಯಲಾಗಲಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಲಭ್ಯಗಳ ಹಾಗೂ ಕ್ರೀಡಾ ವಸತಿ ನಿಲಯದ ಮಕ್ಕಳಿಗೆ ಆಗುತ್ತಿರುವ ಶೋಷಣೆ ಬಗ್ಗೆ ತನಿಖೆಯಾಗಬೇಕು.ಶರಣಗೌಡ ಕಂದಕೂರ, ಗುರುಮಠಕಲ್ ಶಾಸಕರು.