ಕ್ರೀಡೆ ಮನರಂಜನೆಯಲ್ಲ, ಅದೊಂದು ಮನೋಧರ್ಮ: ಡಾ.ನಿರ್ಮಲಾನಂದನಾಥ ಶ್ರೀ

| Published : Jan 28 2024, 01:23 AM IST

ಕ್ರೀಡೆ ಮನರಂಜನೆಯಲ್ಲ, ಅದೊಂದು ಮನೋಧರ್ಮ: ಡಾ.ನಿರ್ಮಲಾನಂದನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕ್ರೀಡೆಯಲ್ಲಿ ಒಂದು ತಂಡ ಗೆಲುವು ಸಾಧಿಸಿದರೆ ಮತ್ತೊಂದು ತಂಡ ಸೋಲುವುದು ಸಹಜ. ಆದರೆ, ಭಾಗವಹಿಸುವಿಕೆ ಬಹಳ ಮುಖ್ಯ. ಕ್ರೀಡಾ ನಿಯಮಗಳನ್ನು ಅರ್ಥೈಸಿಕೊಂಡು ಕ್ರೀಡಾಸ್ಪೂರ್ತಿಯಿಂದ ಆಟವಾಡಿದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕ್ರೀಡೆ ಕೇವಲ ಮನರಂಜನೆಯಲ್ಲ. ಅದೊಂದು ಶಿಕ್ಷಣ, ಸಂಸ್ಕೃತಿ, ಮನೋಧರ್ಮ ಮತ್ತು ಸಂಶೋಧನೆಯಿದ್ದಂತೆ. ಕ್ರೀಡೆಯಲ್ಲಿ ನಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಕಲಿಯಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ ಸರ್ಕಾರ ಹಾಗೂ ಶಾಲಾ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸ್ಕೂಲ್‌ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ 67ನೇ ರಾಷ್ಟ್ರ ಮಟ್ಟದ 19 ವರ್ಷದೊಳಗಿನ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವುದೇ ಕ್ರೀಡೆಯಲ್ಲಿ ಒಂದು ತಂಡ ಗೆಲುವು ಸಾಧಿಸಿದರೆ ಮತ್ತೊಂದು ತಂಡ ಸೋಲುವುದು ಸಹಜ. ಆದರೆ, ಭಾಗವಹಿಸುವಿಕೆ ಬಹಳ ಮುಖ್ಯ. ಕ್ರೀಡಾ ನಿಯಮಗಳನ್ನು ಅರ್ಥೈಸಿಕೊಂಡು ಕ್ರೀಡಾಸ್ಪೂರ್ತಿಯಿಂದ ಆಟವಾಡಿದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಳುಗಳು ನಿಮ್ಮ ನಿಮ್ಮ ರಾಜ್ಯಗಳ ಕನಸಾಗಿದ್ದೀರಿ. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ನೀವು ನಿಮ್ಮ ಪೋಷಕರಿಗೆ, ವಿದ್ಯೆ ಕಲಿಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ನಿಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದ್ದೀರಿ ಎಂದರು.

ನಾಲ್ಕು ದಿನಗಳ ಕಾಲ ನಡೆದ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಕ್ರೀಡಾ ಅಧಿಕಾರಿಗಳು, ಕ್ರೀಡಾ ವ್ಯವಸ್ಥಾಪಕರು ಮತ್ತು ತೀರ್ಪುಗಾರರನ್ನು ವೇದಿಕೆಯಲ್ಲಿ ನಿರ್ಮಲಾನಂದನಾಥಶ್ರೀಗಳು ಗೌರವಿಸಿದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ಕ್ರೀಡಾಧಿಕಾರಿ ಪಂಕಜ್ ದಿವೇದಿ, ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರರಾದ ಶ್ರೀಧರ್, ಲಕ್ಷ್ಮೀನಾರಾಯಣ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಚುಂಚನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಉಷಾ, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಪ್ಪ, ಉಪನ್ಯಾಸಕ ಸಿ.ಆರ್.ಚಂದ್ರಶೇಖರ್, ದೈಹಿಕ ಶಿಕ್ಷಕ ಎಂಎನ್. ಪರಮಶಿವಯ್ಯ, ಮುಳಕಟ್ಟೆ ಶಿವಣ್ಣಗೌಡ ಸೇರಿದಂತೆ ಹಲವರು ಇದ್ದರು.

ಕರ್ನಾಟಕ ಬಹಳ ಸುಂದರ ರಾಜ್ಯ. ಇಲ್ಲಿನ ಬಣ್ಣ, ಜನರು ತೋರಿದ ಪ್ರೀತಿ ಹಾಗೂ ಶ್ರೀಮಠದಲ್ಲಿ ನಾಲ್ಕು ದಿನಗಳ ಕಾಲ ನಮಗೆ ನೀಡಿದ ರುಚಿಕರ ಊಟೋಪಚಾರ ಇಷ್ಟವಾಯಿತು. ಪಂದ್ಯಾವಳಿಯನ್ನು ಸುಂದರ ಪರಿಸರದಿಂದ ಕೂಡಿರುವ ಆದಿಚುಂಚನಗಿರಿ ಮಠದ ಕ್ರೀಡಾಂಗಣದಲ್ಲಿ ಇಷ್ಟೊಂದು ಅಚ್ಚುಕಟ್ಟಾಗಿ ಆಯೋಜಿಸಿರುವ ನಿರ್ಮಲಾನಂದನಾಥ ಶ್ರೀಗಳು ಮತ್ತು ರಾಜ್ಯದ ಕ್ರೀಡಾಕೂಟದ ವ್ಯವಸ್ಥಾಪಕ ಮಂಡಳಿ ಸೇವಾಕಾರ್ಯ ನಿಜಕ್ಕೂ ಶ್ಲಾಘನೀಯ.

-ಪೂನಂ ರಾಬರ್ಟ್, ಉತ್ತರಾಖಂಡ ತಂಡದ ವ್ಯವಸ್ಥಾಪಕಿ.