ಸಾರಾಂಶ
ಭಟ್ಕಳ:ತಾಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗುಂಡಿ ಬೀಚ್‌ಗೆ ಹೋಗುವ ರಸ್ತೆಯಲ್ಲಿ ಪರವಾನಗಿ ತೆಗೆದುಕೊಳ್ಳದೇ ಹಾಕಿರುವ ಆರೋಪದಡಿ ವೀರಸಾರ್ವಕರ್ ಬೀಚ್ ಎನ್ನುವ ಫಲಕ ಮತ್ತು ಕೇಸರಿ ಬಾವುಟ ಇದ್ದ ಸ್ತಂಭವನ್ನು ಶನಿವಾರ ಪೊಲೀಸರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ನಡೆದಿದೆ. ಇತ್ತೀಚೆಗೆ ತೆಂಗಿನಗುಂಡಿ ಬೀಚ್‌ಗೆ ಹೋಗುವ ರಸ್ತೆಯಲ್ಲಿ ಸ್ತಂಭವೊಂದಕ್ಕೆ ವೀರ ಸಾರ್ವಕರ್ ಬೀಚ್ ಎನ್ನುವ ಫಲಕ ಮತ್ತು ಕೇಸರಿ ಬಾವುಟ ಹಾಕಲಾಗಿತ್ತು. ಫಲಕ ಹಾಗೂ ಕೇಸರಿ ಬಾವುಟ ಇದ್ದ ಸ್ತಂಭವನ್ನು ಪರವಾನಗಿ ಪಡೆಯದೇ ಹಾಕಲಾಗಿದೆ ಎಂದು ಸ್ಥಳೀಯ ಪಂಚಾಯಿತಿಗೆ ಗೆ ದೂರು ಹೋದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಹೆಬಳೆ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಜೆಸಿಬಿ ಸಹಾಯದಿಂದ ಫಲಕ ಹಾಗೂ ಸ್ತಂಭ ತೆರವುಗೊಳಿಸಿದ್ದಾರೆ.ಹೆಬಳೆ ಗ್ರಾಮ ಪಂಚಾಯಿತಿಯಲ್ಲಿ ತೆಂಗಿನಗುಂಡಿ ಬೀಚ್ ರಸ್ತೆಗೆ ವೀರ ಸಾರ್ವಕರ್ ಬೀಚ್ ರಸ್ತೆ ಎಂದು ನಾಮಕರಣ ಮಾಡುವ ಬಗ್ಗೆ ಠರಾವು ಕೂಡ ಪಾಸಾಗಿತ್ತು ಎನ್ನಲಾಗಿದೆ. ಆದರೆ ಫಲಕ ಹಾಕುವಾಗ ಪಂಚಾಯಿತಿಯಿಂದ ಪರವಾನಗಿ ಪಡೆಯದಿರುವುದೇ ತೆರವುಗೊಳಿಸಲು ಕಾರಣ ಎಂದು ಗೊತ್ತಾಗಿದೆ. ತೆರವುಗೊಳಿಸುವ ವಿಡಿಯೋ ವೈರಲ್ ಆಗಿದ್ದು, ಹಿಂದೂ ಕಾರ್ಯಕರ್ತರಿಂದ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.