ಸಾರಾಂಶ
ಕ್ರೀಡೆಯು ದೈಹಿಕ ಪ್ರಯೋಜನಗಳು ಮಾತ್ರವಲ್ಲದೇ ಕ್ರೀಡಾಪಟುಗಳ ಏಕಾಗ್ರತೆ ಸುಧಾರಿಸುತ್ತದೆ. ದೈಹಿಕ ಪರಿಶ್ರಮ ಮತ್ತು ಕೌಶಲ್ಯ ಒಳಗೊಂಡಿರುವ ಕ್ರೀಡೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲಿವೆ ಎಂದು ಸಹಾಯಕ ಕ್ರೀಡಾಧಿಕಾರಿ ಎಚ್.ಬಿ. ದಾಸರ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಡಗಿ: ಕ್ರೀಡೆಯು ದೈಹಿಕ ಪ್ರಯೋಜನಗಳು ಮಾತ್ರವಲ್ಲದೇ ಕ್ರೀಡಾಪಟುಗಳ ಏಕಾಗ್ರತೆ ಸುಧಾರಿಸುತ್ತದೆ. ದೈಹಿಕ ಪರಿಶ್ರಮ ಮತ್ತು ಕೌಶಲ್ಯ ಒಳಗೊಂಡಿರುವ ಕ್ರೀಡೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲಿವೆ ಎಂದು ಸಹಾಯಕ ಕ್ರೀಡಾಧಿಕಾರಿ ಎಚ್.ಬಿ. ದಾಸರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಖುರ್ದಕೋಡಿಹಳ್ಳಿಯಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವ -2024 ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮೋಬೈಲ್ ಹಿಂದೆ ಬಿದ್ದಿರುವ ಯುವಜನಾಂಗ ಕ್ರೀಡಾಂಗಣದಿಂದ ದೂರ ಉಳಿಯುತ್ತಿರುವುದು ಖೇದದ ಸಂಗತಿ. ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಪದಕಗಳಿಸಲು ಭಾರತೀಯ ಕ್ರೀಡಾಪಟುಗಳು ಇಂದಿಗೂ ಪರದಾಡುತಿದ್ದಾರೆ. ದೇಶಿಯ ಕ್ರೀಡೆಗಳಾದ ಕಬಡ್ಡಿ, ಖೋಖೋ, ಕುಸ್ತಿ ಮಲ್ಲಕಂಬ ಸೇರಿದಂತೆ ಕ್ರೀಡೆಗಳು ಅನುದಾನವಿಲ್ಲದೇ ಮಂಕಾಗಿದ್ದು ಕ್ರಮೇಣವಾಗಿ ನೇಪಥ್ಯಕ್ಕೆ ಸರಿಯುತ್ತಿವೆ ಎಂದು ವಿಷಾದಿಸಿದರು.ಬಲಿಷ್ಠ ಭಾರತಕ್ಕೆ ಕ್ರೀಡೆಗಳು ಅವಶ್ಯ: ಕಬಡ್ಡಿ ಕೋಚ್ ಮಂಜುಳ ಭಜಂತ್ರಿ ಮಾತನಾಡಿ, ಕ್ರೀಡೆಯು ಒಂದು ದೈಹಿಕ ಚಟುವಟಿಕೆಯಾಗಿದೆ. ಆದರೆ ಜೀವನವನ್ನೇ ಮುಡುಪಾಗಿಟ್ಟು ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳು ಹೆಸರು ಮತ್ತು ಸಾಧನೆ ಜನ ಮಾನಸದಲ್ಲಿ ಉಳಿಯದಿರುವುದು ದುರಂತದ ಸಂಗತಿ. ಹಾಕಿ ಮಾಂತ್ರಿಕ ಧ್ಯಾನಚಂದ್ ಸೇರಿದಂತೆ ಕ್ರೀಡಾ ಸಾಧಕರ ಜಯಂತಿಗಳನ್ನು ಸರ್ಕಾರದ ಪರವಾಗಿ ಆಚರಿಸುವ ಮೂಲಕ ಅವರ ಸಾಧನೆಗೆ ಗೌರವ ಸಲ್ಲಿಸುವ ಕೆಲಸವಾಗಬೇಕಾಗಿದೆ ಎಂದರು.
ಕ್ರೀಡಾತಾರೆಗಳ ಹೆಸರೇ ಮಾಯ: ಪರಶುರಾಮ ತಗಡಿನಮನಿ ಮಾತನಾಡಿ, ಈಗಿನ ಪೀಳಿಗೆ ಯುವಕರಿಗೆ ಹಾರುವ ಕುದುರೆ ಎಂದೇ ಖ್ಯಾತರಾದ ಮಿಲ್ಕಾಸಿಂಗ್, ಸ್ಪ್ರಿಂಟರ್ ಪಿ.ಟಿ.ಉಷಾ, ಅಶ್ವಿನಿ ನಾಚಪ್ಪ ಜೆ.ಜೆ.ಶೋಭಾ ಇವರ ಹೆಸರು ತಿಳಿದಿಲ್ಲ, ಅಷ್ಟೇ ಏಕೆ..? ವಿಶ್ವ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಪಿ.ವಿ. ಸಿಂಧು, ಸೈನಾ ನೈಹ್ವಾಲ್ ಇನ್ನಿತರ ಕ್ರೀಡಾ ತಾರೆ ಹೆಸರನ್ನು ಕೂಡ ಮರೆತರು ಆಶ್ಚರ್ಯ ಪಡಬೇಕಾಗಿಲ್ಲ ಎಂದರು. ಈ ವೇಳೆ ಮುಖ್ಯ ಶಿಕ್ಷಕ ಎಚ್.ಎಸ್.ದೊಡ್ಡಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮಸ್ಥರು ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.